ಕ್ರೈಂರಾಷ್ಟ್ರೀಯ

ಡಿಜಿಟಲ್ ಅರೆಸ್ಟ್: 86ರ ವೃದ್ದೆಯ ಖಾತೆಯಿಂದ 20 ಕೋಟಿ ರೂ ಲಪಟಾಯಿಸಿದ ವಂಚಕರು!

ನಾಗರಿಕ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಆಗಿ ಬರೋಬ್ಬರಿ 20 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ. ದಕ್ಷಿಣ ಮುಂಬೈನ 86 ವರ್ಷದ ವೃದ್ಧೆಯನ್ನು ಸಿಬಿಐ ಅಧಿಕಾರಿಗಳು ಎಂದು ನಂಬಿಸಿದ ವಂಚಕರು ಎರಡು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದು, ವೃದ್ಧೆಯ ಉಳಿತಾಯದ 20 ಕೋಟಿ ರೂ. ಹಣವನ್ನು ಲಪಟಾಯಿಸಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.



2024ರ ಡಿಸೆಂಬರ್ 26ರಂದು ವೃದ್ಧೆಗೆ ವಂಚಕರು ಕರೆ ಮಾಡಿದ್ದು, ಆಧಾರ್ ಕಾರ್ಡ್ ಆಧಾರದ ಮೇಲೆ ನೀವು ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಅದನ್ನು ಮನಿ ಲಾಂಡರಿಂಗ್ಗೆ ಬಳಕೆ ಮಾಡಲಾಗುತ್ತಿದೆ ಎಂದು ಬೆದರಿಸಿದ್ದಾರೆ. ಈ ಪ್ರಕರಣವನ್ನು ಇದೀಗ ಸಿಬಿಐ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ನೀವು ನಿಮ್ಮ ಕೋಣೆಯಲ್ಲಿಯೇ ಇರಬೇಕು, ಡಿಜಿಟಲ್ ಅರೆಸ್ಟ್ಗೆ ಒಳಗಾಗಬೇಕು. ಇಲ್ಲದೇ ಹೋದಲ್ಲಿ ನಿಮ್ಮ ಮಕ್ಕಳನ್ನು ಬಂಧಿಸಲಾಗುವುದು ಎಂದು ಬೆದರಿಸಿದ್ದರು ಎನ್ನಲಾಗಿದೆ.



ಇದರಿಂದ ಆತಂಕಗೊಂಡ ವೃದ್ಧೆ ಎರಡು ತಿಂಗಳ ಕಾಲ ಅಂದರೆ, 2024ರ ಡಿಸೆಂಬರ್ 26ರಿಂದ ಮಾರ್ಚ್ 3, 2025ರ ವರೆಗೆ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದಾರೆ. ಈ ವೇಳೆ ಮಹಿಳೆ ಮನೆಯಲ್ಲಿಯೇ ಇದ್ದಾರೆ ಎಂಬುದನ್ನು ಪರೀಕ್ಷಿಸಲು ಆಕೆಗೆ ಪ್ರತಿ ಮೂರು ಗಂಟೆಗೆ ಒಮ್ಮೆ ಕರೆ ಮಾಡಿ, ಸ್ಥಳದ ಮಾಹಿತಿಯನ್ನು ವಂಚಕರು ಪರಿಶೀಲಿಸುತ್ತಿದ್ದರು ಎಂದು ವರದಿಯಾಗಿದೆ.

ಪ್ರಕರಣದಲ್ಲಿ ವೃದ್ದೆಯ ಹೆಸರು ಕೈಬಿಡುವುದಾಗಿ ವಿವಿಧ ಕಾರಣ ತಿಳಿಸಿ 20.26 ಕೋಟಿ ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಜೊತೆಗೆ ತನಿಖೆ ಮುಗಿದ ಬಳಿಕ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಹಿರಿಯ ನಾಗರಿಕ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!