ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರ ಅಕ್ರಮ ಸಕ್ರಮ ಮಂಜೂರು ಮಾಡಿದ್ದು ನಾನು: ಶಾಸಕ ಅಶೋಕ್ ರೈ
ಪುತ್ತೂರು:ಈ ಹಿಂದೆ ಇಲ್ಲಿ ಬಿಜೆಪಿ ಶಾಸಕರುಗಳೇ ಹೆಚ್ಚು ಅಧಿಕಾರದಲ್ಲಿದ್ದರು ಆದರೆ ನಾನು ಶಾಸಕನಾದ ಮೇಲೆ ಅನೇಕ ಮಂದಿ ಬಿಜೆಪಿ ಕಾರ್ಯಕರ್ತರು, ಶಕ್ತಿ ಕೇಂದ್ರದ ಅಧ್ಯಕ್ಷರೂ, ಗ್ರಾಪಂ ಸದಸ್ಯರುಗಳು ನನ್ನ ಬಳಿ ಬಂದು ಅಕ್ರಮ ಸಕ್ರಮ ಮಂಜೂರು ಮಾಡಿಸಿಕೊಂಡು ಹೋಗಿದ್ದಾರೆ. ಅಭಿವೃದ್ದಿಯಲ್ಲಿ, ಸವಲತ್ತು ವಿತರಣೆಯಲ್ಲಿ ನಾನು ಯಾವುದೇ ರಾಜಕೀಯ ಮಾಡದೆ ರಾಜ ಧರ್ಮ ಪಾಲನೆ ಮಾಡಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಮುಂಡೂರು ಗ್ರಾಮದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಶಾಸಕರಿದ್ದಾಗಲೂ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರ ಅಕ್ರಮ ಸಕ್ರಮ ಅರ್ಜಿಯನ್ನು ಯಾಕೆ ವಿಲೇವಾರಿ ಮಾಡಿಲ್ಲ ಎಂಬುದು ನನಗೆ ಗೊತ್ತಿಲ್ಲ, ನನ್ನ ಬಳಿ ಬಂದಾಗ ನಾನು ಅವರು ಬಿಜೆಪಿ ಎಂದು ನೋಡದೆ ಮಂಜೂರು ಮಾಡಿಸಿದ್ದೇನೆ. ಅನೇಕ ಮಂದಿ ಬಿಜೆಪಿ ಕಾರ್ಯಕರ್ತರು ಕೂಡಾ ಬಂದಿದ್ದಾರೆ ಯಾರನ್ನೂ ಹಿಂದಕ್ಕೆ ಕಳಿಸಿಲ್ಲ. 94 ಸಿ, 94 ಸಿ ಸಿ ಮಾಡಿಕೊಟ್ಟಿದ್ದೇನೆ. ಶಾಸಕನಾದ ಬಳಿಕ ನಾನು ಎಲ್ಲರಿಗೂ ಶಾಸಕ ಎಂಬುದನ್ನು ತೋರಿಸಿಕೊಟ್ಟ ತೃಪ್ತಿ ನನಗಿದೆ. ಅವರದ್ದೇ ಪಕ್ಷದ ಶಾಸಕರಿರುವ ಇತರೆ ಕ್ಷೇತ್ರದಲ್ಲಿ ಒಂದೇ ಒಂದು ಅಕ್ರಮ ಸಕ್ರಮ ಆಗಿಲ್ಲ. ಇತರೆ ಕ್ಷೇತ್ರದ ಜನರೂ ನನ್ನ ಕಚೇರಿಗೆ ಬಂದು ನೋವು ಹೇಳುತ್ತಿದ್ದಾರೆ ಎಂದು ಶಾಸಕರು ಹೇಳಿದರು.