ಪುತ್ತೂರಿಗೆ ಲೋಕೋಪಯೋಗಿ ಸಚಿವ ಸತೀಶ್‌ಜಾರಕಿಹೊಳಿ ಭೇಟಿ
ಪುತ್ತೂರು: ಪುತ್ತೂರಿನಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕಿಯೆಗೆ ಚಾಲನೆ ನೀಡುವಂತೆ ಇಲಾಖಾ ಇಂಜನಿಯರ್‌ಗೆ ಸೂಚನೆ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನೂತನ ರಸ್ತೆಗೆ 3 ಕೋಟಿ ಅನುದಾನ ಮಂಜೂರು, ಪ್ರವಾಸಿ ಮಂದಿರಕ್ಕೆ ಹೆಚ್ಚುವರಿಯಾಗಿ 5 ಕೋಟಿ ಮಂಜೂರು, ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಾರಾಡಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ, ಆನೆಮಜಲಿನಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣದಲ್ಲಿರುವ ಬಾರ್ ಅಸೋಸಿಯೇಶನ್‌ನ ಪೀಠೋಪಕರಣಗಳ ಖರೀದಿಗೆ ಅನುದಾನ ಮತ್ತು ಪುತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಮುಗಿಸುವಂತೆ ಸೂಚನೆ ಇದು ಪುತ್ತೂರಿಗೆ ಭಾನುವಾರ ದಿಡೀರನೆ ಆಗಮಿಸಿದ್ದ ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಪುತ್ತೂರಿಗೆ ನೀಡಿದ ಹೊಸ ಯೋಜನೆ ಮತ್ತು ಅನುದಾನಗಳು.

ಭಾನುವಾರ ಸಂಜೆ ದಿಡೀರನೆ ಪುತ್ತೂರಿಗೆ ಆಗಮಿಸಿದ ಸಚಿವರನ್ನು ಶಾಸಕರಾದ ಅಶೋಕ್ ರೈಯವರು ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿದರು.
ಪ್ರವಾಸಿ ಮಂದಿರದಲ್ಲಿ ಸಚಿವರ ಜೊತೆ ಶಾಸಕರು ಪುತ್ತೂರಿನ ಅಭಿವೃದ್ದಿಯ ವಿಚಾರಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಈಗಾಗಲೇ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 35 ಕೋಟಿ ರೂ ಅನುದಾನವನ್ನು ನೀಡಿದ್ದೀರಿ ಮುಂದೆಯೂ ತಮ್ಮ ಮೂಲಕ ಹೆಚ್ಚಿನ ಅನುದಾನವನ್ನು ನಿರೀಕ್ಷಿಸುತ್ತಿರುವುದಾಗಿ ಶಾಸಕರು ಹೇಳಿದರು.
ಸಚಿವರೊಡನೆ ಮಾತುಕತೆ ನಡೆಸಿದ ಶಾಶಕರು ಪುತ್ತೂರಿಗೆ ರಿಂಗ್ ರೋಡಿನ ಅವಶ್ಯಕತೆ ಇದೆ. ಬೆಳೆಯುತ್ತಿರುವ ನಗರ ಮತ್ತು ಮುಂದೆ ಜಿಲ್ಲಾ ಕೇಂದ್ರವಾಗಿ ರೂಪುಗೊಳ್ಳಲಿರುವ ಪುತ್ತೂರು ನಗರಕ್ಕೆ ರಿಂಗ್ ರಸ್ತೆಯ ಬೇಡಿಕೆ ಇದೆ, ಇದಕ್ಕಾಗಿ ತಮ್ಮ ಅನುಮೋದನೆ ಬೇಕಿದೆ ಎಂದು ಹೇಳಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ರಿಂಗ್ ರೋಡು ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಬೇಕಿದ್ದು ತಕ್ಷಣದಿಂದಲೇ ಭೂ ಸ್ವಾಧೀನ ಪ್ರಕ್ರಿಯೆ ಚಾಲನೆ ನೀಡುವಂತೆ ಸಚಿವರು ಸೂಚನೆ ನೀಡಿದರು. ಪುತ್ತೂರಿನಲ್ಲಿ ರಿಂಗ್ ರೋಡು ನಿರ್ಮಾಣವಾದಲ್ಲಿ ಟ್ರಾಫಿಕ್ ನಿಯಂತ್ರಣದ ಜೊತೆಗೆ ಪುತ್ತೂರು ನಗರದೊಳಗೆ ಸುಲಭದಲ್ಲಿ ಸಂಚಾರ ಮಾಡಬಹುದಾಗಿದೆ.
ಪ್ರವಾಸಿ ಮಂದಿರಕ್ಕೆ 5 ಕೋಟಿ: ಪುತ್ತೂರಿನ ಪ್ರವಾಸಿ ಮಂದಿರಕ್ಕೆ ಈಗಾಗಲೇ 3 ಕೋಟಿ ಮಂಜೂರಾಗಿದ್ದು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಇನ್ನೂ 5 ಕೋಟಿ ಅವಶ್ಯಕತೆ ಇದ್ದು ಅನುದಾನ ನೀಡುವ ಕುರಿತು ಶಾಸಕರು ಸಚಿವರಲ್ಲಿ ಮನವಿ ಮಾಡಿದ್ದು ಸ್ಪಂದಿಸಿದ ಸಚಿವರು ಹೆಚ್ಚುವರಿಯಗಿ 5 ಕೋಟಿ ಮಂಜೂರು ಮಾಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥನದ ಬಳಿಕ ನಿರ್ಮಾಣವಾಗಲಿರುವ ನೂತನ ರಸ್ತೆಗೆ ಹೆಚ್ಚುವರಿಯಾಗಿ 3 ಕೋಟಿ ಅನುದಾನವನ್ನು ಸಚಿವರು ಮಂಜೂರು ಮಾಡಿದರು.