ಬೈಕ್ ಓವರ್‌ಟೇಕ್ ಮಾಡಲು ಬೇಕಾಬಿಟ್ಟಿಯಾಗಿ ಬಸ್ ಚಲಾಯಿಸಿದ ಚಾಲಕ-ಪ್ರಯಾಣಿಕರ ಆಕ್ರೋಶ
ಪುತ್ತೂರು: ಚಾಲನೆಯ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರ ತೊಂದರೆ ಕೊಟ್ಟ ಎಂಬ ಕಾರಣಕ್ಕೆ ಆತನನ್ನು ಹಿಂಬಾಲಿಸಲು ಕೆಎಸ್‌ಆರ್‌ಟಿಸಿ ಬಸ್ ಚಾಲಕ ಯದ್ವಾತದ್ವವಾಗಿ ಬಸ್ ಚಲಾಯಿಸಿದ ಘಟನೆ ನ.6ರಂದು ಕಬಕದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕಾಸರಗೋಡು ಮಲ್ಲದಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ನಂತರ ಮಂಗಳೂರಿಗೆ ತೆರಳುವ ಸಂದರ್ಭದಲ್ಲಿ ಬೈಕ್ ಸವಾರನೋರ್ವ ಬಸ್ ಚಾಲಕನಿಗೆ ರಸ್ತೆಯಲ್ಲಿ ಅಡ್ಡ ಬಂದು ತೊಂದರೆ ಕೊಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಬಸ್ ಚಾಲಕ ಬೈಕನ್ನು ಓವರ್ ಟೇಕ್ ಮಾಡುವುದಕ್ಕಾಗಿ ಅತೀ ವೇಗದಿಂದ ಮತ್ತು ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿ ವಿಚಿತ್ರ ರೀತಿಯಲ್ಲಿ ವರ್ತಿಸಿದ್ದಾರೆ.
ಇದರಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಬಸ್ ಚಾಲಕನನ್ನು ತರಾಟೆಗೆತ್ತಿಕೊಂಡಿರುವುದಲ್ಲದೆ ಈ ಚಾಲಕ ಇರುವ ಬಸ್‌ನಲ್ಲಿ ಪ್ರಯಾಣಿಸುವುದಿಲ್ಲ ಎಂದು ಬಸ್ ನಿರ್ವಾಹಕನಿಗೆ ತಿಳಿಸಿದ್ದಾರೆ. ನಿರ್ವಾಹಕ ಅದೇ ದಾರಿಯಲ್ಲಿ ಬರುತ್ತಿದ್ದ ಇನ್ನೊಂದು ಬಸ್‌ನಲ್ಲಿ ತೆರಳಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.