ಅಪಘಾತದಿಂದ ಮೃತಪಟ್ಟ ಕಕ್ಕೂರು ರಾಮಯ್ಯ ರೈ ಮನೆಗೆ ಶಾಸಕ ಅಶೋಕ್ ರೈ ಭೇಟಿ
ಪುತ್ತೂರು:ಕಳೆದ ಕೆಲವು ದಿನಗಳ ಹಿಂದೆ ಸುಳ್ಯದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಬೆಟ್ಟಂಪಾಡಿ ಗ್ರಾಮದ ಕಕ್ಕೂರು ನಿವಾಸಿ ರಾಮಯ್ಯ ರೈ ಅವರ ಮನೆಗೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿ, ಆರ್ಥಿಕ ನೆರವು ನೀಡಿದರು.

ಭಜನಾ ಕಾರ್ಯಕ್ರಮಕ್ಕೆ ತೆರಳಿದ್ದ ರಾಮಯ್ಯ ರೈ ಅವರು ತನ್ನ ಅಳಿಯನ ಜೊತೆ ತೆರಳುತ್ತಿದ್ದ ವೇಳೆ ಸುಳ್ಯದ ಕಾರೊಂದು ಹಿಟ್ ಅಂಡ್ ರನ್ ಮಾಡಿತ್ತು. ಅಪಘಾತದಲ್ಲಿ ರಾಮಯ್ಯ ರೈ ಮತ್ತು ಅವರ ಅಳಿಯ ಸ್ಥಳದಲ್ಲೇ ಮೃತಪಟ್ಟಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಕಾರು ಚಾಲಕ ತಲೆಮರೆಸಿಕೊಂಡಿದ್ದಾನೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ: ಹಿಟ್ ಅಂಡ್ ರನ್ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಮೃತಪಟ್ಟ ಕುಟುಂಬಕ್ಕೆ ಕಾರು ಮಾಲಿಕ ಸೂಕ್ತ ಪರಿಹಾರವನ್ನು ನೀಡಬೇಕು. ಅಪಘಾತದಿಂದ ರಾಮಯ್ಯ ಅವರ ನಿಧನದ ಬಳಿಕ ಕುಟುಂಬ ಅನಾಥವಾಗಿದೆ. ಇಬ್ಬರು ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿರುವ ಕಾರಣ ಕುಟುಂಬಕ್ಕೆ ಆಧಾರವೇ ಇಲ್ಲದಂತಾಗಿದೆ. ಮನೆ ನಿರ್ಮಾಣ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ. ಆಸರೆಯಿಲ್ಲದ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ಶಾಸಕ ಅಶೋಕ್ ರೈ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಪರಿಹಾರ ನೀಡದೇ ಇದ್ದಲ್ಲಿ ಮನೆ ಮುಂದೆ ದರಣಿ: ರಾಮಯ್ಯ ರೈ ಕುಟುಂಬಕ್ಕೆ ಕಾರು ಮಾಲಿಕರು ಸೂಕ್ತ ಪರಿಹಾರ ನೀಡದೇ ಇದ್ದಲ್ಲಿ ಮಾಲಿಕರ ಮನೆಯ ಮುಂದೆ ಕುಟುಂಬ ಸದಸ್ಯರು ಧರಣಿ ಕೂರಲಿದ್ದು ನಾನು ಅದಕ್ಕೆ ಬೆಂಬಲ ನೀಡಲಿದ್ದೇನೆ. ಇನ್ಸೂರೆನ್ಸ್ ಕ್ಲೈಮ್ ಆಗುತ್ತದೆ ಎಂದು ಮಾಲಿಕರು ಉಡಾಫೆ ತೋರಬಾರದು. ಇನ್ಸೂರೆನ್ಸ್ ಕ್ಲೈಮ್ ಆಗುತ್ತದೆ ಎಂದು ರಸ್ತೆಯಲ್ಲಿ ನಡೆದುಕೊಂಡು ಹೋಗುವವರನ್ನು ವಾಹನ ಡಿಕ್ಕಿ ಹೊಡೆಸಿ ಕೊಲ್ಲುವುದಕ್ಕೆ ಅರ್ಥ ಉಂಟ, ಇದು ಅನ್ಯಾಯದ ಸಾವು, ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಬೇಕು ಮತ್ತು ತಲೆಮರೆಸಿಕೊಂಡಿರುವ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಕಷ್ಟವಾದರೆ ನನ್ನ ಬಳಿ ಬನ್ನಿ: ಕುಟುಂಬದ ಆಧಾರ ಸ್ತಂಬವನ್ನು ಕಳೆದುಕೊಂಡಿರುವ ನಿಮಗೆ ಜೀವನ ನಡೆಸಲು ಕಷ್ಟ ಸಾಧ್ಯವಾದರೆ ನನ್ನ ಬಳಿ ಬನ್ನ ನಾನು ನಿಮಗೆ ನೆರವಾಗುತ್ತೇನೆ. ಓರ್ವ ಶಾಸಕನೆಂಬ ನೆಲೆಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಮಾನವ ಧರ್ಮ ನನ್ನ ಮೇಲಿದೆ. ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಡಿ, ಉದ್ಯೋಗ ದೊರಕಿಸಿ ಕೊಡುವಲ್ಲಿ ನೆರವಾಗುತ್ತೇನೆ. ನಾನು ನಿಮ್ಮ ಜೊತೆ ಇದ್ದೇನೆ ಎಂದು ಹೇಳಿದ ಶಾಸಕರು ತುರ್ತಾಗಿ ಕುಟುಂಬಕ್ಕೆ 15 ಸಾವಿರ ರೂ ಧನ ಸಹಾಯ ಮಾಡಿದರು.
ಫೋಟೋ ಕ್ಲಿಕ್ಕಿಸಿ ಫೇಸ್ ಬುಕ್ಕಲ್ಲಿ ಹಾಕ್ತಾರೆ: ಶಾಸಕರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಗ್ರಾಮಸ್ಥರು ಈ ಕುಟುಂಬವನ್ನು ನೀವು ಎಂದೂ ಕೈ ಬಿಡಬಾರದು. ಕುಟುಂಬಕ್ಕೆ ನ್ಯಾಯ ದೊರೆಯಬೇಕು, ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಶಾಸಕರಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಆರೋಪ ಮಾಡಿದ ಗ್ರಾಮಸ್ಥರು ಈ ಮನೆಗೆ ಕೆಲವು ರಾಜಕೀಯ ನಾಯಕರು ಭೇಟಿ ನೀಡಿದ್ದಾರೆ, ಜೊತೆಗೆ ಬಂದವರಲ್ಲಿ ಫೋಟೋ ತೆಗೆಸಿ ಅದನ್ನು ಫೇಸ್ ಬುಕ್, ವ್ಯಾಟ್ಸಪ್ಪಲ್ಲಿ ಹಾಕುತ್ತಾರೆ ಒಂದು ರುಪಾಯಿ ಕೂಡಾ ನೆರವು ನೀಡಿಲ್ಲ. ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ರಾಜಕೀಯ ವ್ಯಕ್ತಿಗಳು ಇಲ್ಲಿಗೆ ಬರುವುದು ಬೇಡ, ನಮಗೆ ಅಂಥವರ ಸಹವಾಸವೂ ಬೇಡ ಎಂದು ಹೇಳಿದ ಅವರು ನೀವು ಈ ಕುಟುಂಬಕ್ಕೆ ನ್ಯಾಯ ಕೊಡುವಿರಿ ಎಂಬ ಭರವಸೆಯೂ ಇದೆ, ಆರ್ಥಿಕ ನೆರವನ್ನೂ ನೀಡಿದ್ದೀರಿ, ಮುಂದಿನ ಭವಿಷ್ಯಕ್ಕೆ ಭರವಸೆಯನ್ನು ನೀಡಿದ್ದೀರಿ ಎಂದು ಹೇಳಿದರು.
ಶಾಸಕರು ನ್ಯಾಯ ಕೊಡಿಸುತ್ತಾರೆ: ಕೆ ಪಿ ಆಳ್ವ ಮೃತ ರಾಮಯ್ಯ ರೈ ಅವರ ಕುಟುಂಬಕ್ಕೆ ಶಾಸಕರು ನ್ಯಾಯ ಕೊಡಿಸುತ್ತಾರೆ. ಧರ್ಮದ ಹೆಸರಿನಲ್ಲಿ ವೇದಿಕೆ ಸಿಕ್ಕಾಗ ಮಾತನಾಡುವವರು ಇಲ್ಲಿ ಬಂದು ಫೋಟೋ ಕ್ಲಿಕ್ಕಿಸಿ ಹೋಗುತ್ತಿದ್ದಾರೆ ಎಂಬ ಆರೋಪವೂ ಇದೆ. ಇದು ಸರಿಯಲ್ಲ, ಕುಟುಂಬಕ್ಕೆ ಎಲ್ಲರೂ ಸೇರಿ ನೆರವು ನೀಡುವ ಕಾರ್ಯ ನಡೆಯಬೇಕು. ಶಾಸಕರು ಈ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದು ಮಾತ್ರವಲ್ಲದೆ ಅವರ ಮಕ್ಕಳಿಗೆ ಉದ್ಯೋಗದ ಭರವಸೆಯನ್ನು ನೀಡಿರುವುದು ಅಭಿನಂದನಾರ್ಹವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮೊಯಿದು, ಸ್ಥಳೀಯರಾದ ಜಯಪ್ರಕಾಶ್ ರೈ , ಸುಭಾಶ್ ರೈ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.