ಬೆಳಗಾವಿ: ಆಟೋ ಚಾಲಕನಿಂದ ಮಾಜಿ ಶಾಸಕನ ಕೊಲೆ
ಬೆಳಗಾವಿಯಲ್ಲಿ ಮಾಜಿ ಶಾಸಕನ ಕೊಲೆಯಾಗಿದೆ. ಫೆ 15ರಂದು ಬೆಳಗಾವಿಯ ಖಡೇಬಜಾರ್ ನಲ್ಲಿ ಇರೋ ಶ್ರೀನಿವಾಸ ಲಾಡ್ಜ್ ಮುಂದೆ ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೂ ಮಾಮಲೇದಾರ್ ಎನ್ನುವರನ್ನು ಹತ್ಯೆ ಮಾಡಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನೇ ಲಾವೂ ಮಾಮಲೇದಾರ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಪರಿಣಾಮ ಮಾಜಿ ಶಾಸಕ ಲಾವೂ ಮಾಮಲೇದಾರ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೋ ಮಾಮಲೇದಾರ್ ಇಂದು ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಬೆಳಗಾವಿಯ ಖಡೇಬಜಾರ್ ಬಳಿಕ ಆಟೋಗೆ ಮಾಜಿ ಶಾಸಕರ ಕಾರು ತಾಗಿದೆ ಎನ್ನಲಾಗಿದೆ. ಬಳಿಕ ಮಾಜಿ ಶಾಸಕ ಲಾವೋ ಮಾಮಲೇದಾರ್ ಕಾರನ್ನು ನಿಲ್ಲಿಸದೇ ಹೋಗಿದ್ದರು ಎನ್ನಲಾಗಿದ್ದು ಕೋಪಗೊಂಡ ಆಟೋ ಚಾಲಕ ಹಿಂಬಾಲಿಕೊಂಡು ಹೋಗಿದ್ದಾನೆ. ಬಳಿಕ ಲಾವೋ ಮಾಮಲೇದಾರ್ ಅವರು ಲಾಡ್ಜ್ ವೊಂದರ ಬಳಿ ಬಂದು ನಿಂತಿದ್ದಾಗ ಆಟೋ ಚಾಲಕ ಜಗಳ ಆರಂಭಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆಗ ಸ್ಥಳೀಯರು ಹಾಗೂ ಲಾಡ್ಜ್‌ನ ಸಿಬ್ಬಂದಿ ಬಂದು ಇಬ್ಬರ ಜಗಳವನ್ನು ಬಿಡಿಸಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಮಾಜಿ ಶಾಸಕ ಲಾವೂ ಮಾಮಲೇದಾರ್ ಕುಸಿದು ಬಿದ್ದು ಮೃತಟ್ಟಿದ್ದಾರೆ ಎಂದು ವರದಿಯಾಗಿದೆ.