ರಕ್ಷಣೆಗೆ ಮುಂದಾದವರಿಗೆ ಕಚ್ಚಿ ಗಾಯಗೊಳಿಸಿದ ಬೆಕ್ಕು
ಪುತ್ತೂರು: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋದ ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಬೆಕ್ಕು ಕಚ್ಚಿದ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ. ಬೆಕ್ಕಿನ ದಾಳಿಯಿಂದ ಅಗ್ನಿಶಾಮಕದಳದ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಕೆಲ ಹೊತ್ತು ಸಿಬ್ಬಂದಿಯ ಕೈಯನ್ನು ಗಟ್ಟಿಯಾಗಿ ಬೆಕ್ಕು ಕಚ್ಚಿ ಹಿಡಿದಿದ್ದು ಬೆಕ್ಕಿನ ಅನೀರಿಕ್ಷಿತ ದಾಳಿಯಿಂದ ಅಗ್ನಿ ಶಾಮಕದಳದ ಸಿಬ್ಬಂದಿ ಕೈಯನ್ನು ಬಿಡಿಸಲು ಹರಸಾಹಸ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಬೆಕ್ಕು ಮೇಲೆ ಬರಲಾರದೆ ಬಾವಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಮನೆಯವರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ತಕ್ಷಣ ಅಗ್ನಿಶಾಮಕದಳದವರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಇಬ್ಬರು ಸಿಬ್ಬಂದಿಗಳು ಬಾವಿಗೆ ಇಳಿದಿದ್ದಾರೆ.
ಬಾವಿಯೊಳಗಿದ್ದ ಬೆಕ್ಕನ್ನು ರಕ್ಷಿಸಲು ಸಿಬ್ಬಂದಿಗಳು ಪ್ರಯತ್ನ ಪಡುತ್ತಿದ್ದಂತೆ ಬೆಕ್ಕು ಅವರ ಮೇಲೆರಗಿದೆ. ಬೆಕ್ಕಿನ ದಾಳಿಗೆ ಇಬ್ಬರು ಗಾಯಗೊಂಡಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.