ಮುಂಡೂರಿಗೆ ಆರ್.ಟಿ.ಓ ಟ್ರ್ಯಾಕ್ ಮಂಜೂರು ಮಾಡುವಂತೆ ಶಾಸಕ ಅಶೋಕ್ ರೈ ಮನವಿ ಸಲ್ಲಿಕೆ
ಪುತ್ತೂರು: ಪುತ್ತೂರಿಗೆ ಆರ್.ಟಿ.ಒ ಟ್ರ್ಯಾಕ್ ಮಂಜೂರುಗೊಳಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಸರಕಾರಕ್ಕೆ ಮನವಿ ಸಲ್ಲಿಸಿದರು.
ಪುತ್ತೂರು ಹೋಬಳಿಯ ಮುಂಡೂರು ಗ್ರಾಮದಲ್ಲಿ ಸರ್ವೆ ನಂ 130/10 ಹಾಗೂ 142/1 ರಲ್ಲಿ ಒಟ್ಟು 5.40 ಎಕರೆ ಜಮೀನನ್ನು ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಮತ್ತು ಚಾಲನ ತರಬೇತಿ ಕೇಂದ್ರ ಸ್ಥಾಪನೆಗೆ ಕಾಯ್ದಿರಿಸಿ ಸಾರಿಗೆ ಇಲಾಖೆಗೆ ಮಂಜೂರು ಮಾಡಿ ಆದೇಶಿಸಿರುವುದರಿಂದ, ಸದರಿ ಸ್ಥಳದಲ್ಲಿ ಟ್ರ್ಯಾಕ್ & ಚಾಲನಾ ತರಬೇತಿ ಕೇಂದ್ರ ಸ್ಥಾಪನೆಗೆ ಮಂಜೂರಾತಿ ನೀಡುವಂತೆ ಶಾಸಕರು ಮನವಿಯಲ್ಲಿ ವಿನಂತಿಸಿದ್ದಾರೆ.
ಸಾರಿಗೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಎನ್ ವಿ ಪ್ರಸಾದ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಕ್ಯಾಬಿನೆಟ್ ನಲ್ಲಿ ಇದು ಮಂಜೂರುಗೊಳ್ಳಬೇಕಿದೆ. ಆರ್‌ಟಿಒ ಟ್ರ್ಯಾಕ್ ಉಡುಪಿಗೆ ಮಂಜೂರಾಗಿದ್ದು ಅಲ್ಲಿ ಭೂ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ ಅದಕ್ಕೆ ಬದಲಾಗಿ ಹೊನ್ನಾವರವನ್ನು ಸೇರ್ಪಡೆಗೊಳಿಸಲು ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಕೈಬಿಟ್ಟು 2024-25 ಸಾಲಿನ ಅನುಮೋದಿತ ಕ್ರಿಯಾ ಯೋಜನೆಯ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥವನ್ನು ನಿರ್ಮಿಸುವ ಯೋಜನೆಯಲ್ಲಿ ಉಡುಪಿಗೆ ಬದಲಾಗಿ ಪುತ್ತೂರು ಅನ್ನು ಸೇರ್ಪಡೆಗೊಳಿಸಲು ಶಾಸಕರು ವಿನಂತಿಸಿದ್ದಾರೆ.
ಮುಂಡೂರಿನಲ್ಲಿ ಆರ್‌ಟಿಒ ಟ್ರ್ಯಾಕ್ ನಿರ್ಮಾಣಕ್ಕೆಂದು ಜಾಗ ಕಾಯ್ದಿರಿಸಲಾಗಿದೆ. ಟ್ರ್ಯಾಕ್ ಉಡುಪಿಗೆ ಮಂಜೂರಾಗಿದ್ದು ಅಲ್ಲಿ ನಿವೇಶನವಿಲ್ಲದ ಕಾರಣ ಅದನ್ನು ಹೊನ್ನಾವರಕ್ಕೆ ಶಿಫ್ಟ್ ಮಾಡಿದ್ದರು. ಅಲ್ಲಿಗೆ ಬದಲಾಗಿ ಅದನ್ನು ಪುತ್ತೂರಿಗೆ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದೇನೆ. ಪುತ್ತೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣವಾಗಬೇಕೆಂಬುದು ನನ್ನ ಕನಸಾಗಿತ್ತು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಈಗಾಗಲೇ ಎರಡು ಹೆಜ್ಜೆ ಮುಂದಿಟ್ಟಿದ್ದೇನೆ, ಈ ಯೋಜನೆಯು ಯಶಸ್ವಿಯಾಗಲಿದೆ. ಸರಕಾರದ ಸಚಿವರು ಹಾಗೂ ಅಧಿಕಾರಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಹೊಸ ಹೊಸ ಯೋಜನೆಗಳು, ವ್ಯವಸ್ಥೆಗಳು ಇಲ್ಲಿಯೇ ನಿರ್ಮಾಣವಾದಲ್ಲಿ ಪುತ್ತೂರು ಅಭಿವೃದ್ದಿಯಾಗುವುದರ ಜೊತೆ ಇಲ್ಲಿ ಉದ್ಯೋಗವೂ ಸೃಷ್ಟಿಯಾಗಲಿದೆ. ಪುತ್ತೂರು ಅಭಿವೃದ್ದಿಯಾಗಬೇಕೆಂಬುದೇ ನನ್ನ ಕನಸು ಅದು ನನಸಾಗಗುವ ಪೂರ್ಣ ಭರವಸೆ ಇದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.