ಹೊರ ಜಿಲ್ಲೆಯ ಜೆಸಿಬಿ ಮಾಲಕರು ಆಪರೇಟರ್‌ಗಳ ಮೇಲೆ ದಬ್ಬಾಳಿಕೆ ಆರೋಪ: ಜೆಸಿಬಿ, ಹಿಟಾಚಿಗಳ ನೊಂದ ಮಾಲಕರ, ಆಪರೇಟರ್‌ಗಳ ಸಭೆ
ಪುತ್ತೂರು: ಪುತ್ತೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಜಿಲ್ಲೆಯ ಮಾಲಕರು ಮತ್ತು ಆಪರೇಟರ್‌ಗಳ ಮೇಲೆ ಸ್ಥಳೀಯವಾಗಿ ಕೆಲವೊಂದು ವ್ಯಕ್ತಿಗಳು ದಬ್ಬಾಳಿಕೆ ನಡೆಸುವುದು ಹಾಗೂ ದೌರ್ಜನ್ಯ ಎಸಗಿ ಅವರನ್ನು ಜಿಲ್ಲೆಯಿಂದ ಹೊರ ನಡೆಯುವಂತೆ ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿದ್ದು ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಪುನಾರಾವರ್ತನೆಯಾದಲ್ಲಿ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಬಳ್ಳಾರಿ ಜೈಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು, ಅಮಾಯಕರ ಮೇಲೆ ದೌರ್ಜನ್ಯ ನಡೆಸಲು ನಾವು ಬಿಡುವುದಿಲ್ಲ, ಪುಂಡಾಟಿಕೆ, ದಾದಾಗಿರಿ ನಡೆಸುವುದನ್ನು ನಿಲ್ಲಿಸಲೂ ನಮಗೆ ಗೊತ್ತಿದೆ, ಈ ರೀತಿಯ ದೌರ್ಜನ್ಯ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇಂತಹ ಘಟನೆಗಳೆಲ್ಲವನ್ನೂ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ, ಸರಕಾರವೂ ಕೈಕಟ್ಟಿ ಕುಳಿತಿಲ್ಲ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಹೊರ ಜಿಲ್ಲೆಗಳಿಂದ ಆಗಮಿಸಿ ಇಲ್ಲಿ ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಜೆಸಿಬಿ, ಹಿಟಾಚಿ ಮಾಲಕರು ಹಾಗೂ ಆಪರೇಟರ್‌ಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನ.28ರಂದು ಸಂಜೆ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಹಲವಾರು ವರ್ಷಗಳಿಂದ ಇಲ್ಲಿಗೆ ಬಂದು ಜೆಸಿಬಿ ಆಪರೇಟರ್ ಆಗಿ ದುಡಿದು ಮಾಲಕರಾಗಿರುವ ಘಟ್ಟ ಪ್ರದೇಶದ ಕೆಲವೊಂದು ಮಂದಿಗೆ ಜಿಲ್ಲೆ ಬಿಟ್ಟು ಹೋಗಬೇಕು ಎಂಬ ಸ್ಥಳೀಯರಿಂದ ಬೆದರಿಕೆಯನ್ನು ಹಾಕಲಾಗುತ್ತಿದೆ. ಜೆಸಿಬಿ ಆಪರೇಟರ್‌ಗಳ ಸಂಘಟನೆಯ ಹೆಸರಿನಲ್ಲಿ ಈ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯವಾಗಿದೆ. ಜೆಸಿಬಿ ಮತ್ತು ಹಿಟಾಚಿ ಮೂಲಕ ರಾಜ್ಯದ ಯಾವುದೇ ಭಾಗದಲ್ಲಿ ಕೆಲಸ ಮಾಡಬಹುದು. ಸಂಘಟನೆಗಳು ಜನರ ಒಳಿತಿಗಾಗಿ ಕೆಲಸ ಮಾಡಬೇಕು ಹೊರತು ಈ ರೀತಿ ದೌರ್ಜನ್ಯ ನಡೆಸುವುದು ಸರಿಯಲ್ಲ. ಬುದ್ದಿವಂತರ ಜಿಲ್ಲೆಯೆಂದು ಹೇಳಲಾಗುವ ನಮ್ಮ ಜಿಲ್ಲೆಯಲ್ಲಿ ಇಂತಹ ನಡೆ ಅಸಹನೀಯವಾಗಿದೆ. ಇದಕ್ಕೆ ನಾವು ಎಂದಿಗೂ ಆಸ್ಪದ ನೀಡುವುದಿಲ್ಲ. ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು. ದೌರ್ಜನ್ಯದಂತಹ ನೈತಿಕ ಪೊಲೀಸ್‌ಗಿರಿ ತೋರಿಸುವ ವ್ಯಕ್ತಿಗಳ ವಿರುದ್ದ ಗೂಂಡಾ ಕಾಯ್ದೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಹೊರ ಜಿಲ್ಲೆಗಳಿಂದಲೇ ಬಂದವರು. ಅವರನ್ನು ಜಿಲ್ಲೆಯಿಂದ ಓಡಿಸಲು ಸಾಧ್ಯವಿದೆಯೇ? ಅನೈತಿಕ ಪೊಲೀಸ್ ಗಿರಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ಈಗಾಗಲೇ ಪುತ್ತೂರು ಡಿವೈಎಸ್‌ಪಿ ಅವರಿಗೆ ದೂರು ನೀಡಲಾಗಿದೆ. ಜೊತೆಗೆ ಪುತ್ತೂರು ಶಾಸಕರ, ವಿಧಾನ ಸಭಾ ಸ್ಪೀಕರ್, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಅಶೋಕ್ ರೈ ಅವರು ಈ ಬಗ್ಗೆ ಪ್ರಸ್ತಾಪ ಮಾಡುವಂತೆ ಕೇಳಿಕೊಳ್ಳಲಾಗುವುದು. ಜಿಲ್ಲೆಗೆ ಕಳಂಕ ತರುವ ಕೆಲಸ ಮಾಡುವವರನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.
ನಾವು ಮುಂದಕ್ಕೆ ಪುತ್ತೂರಲ್ಲಿ ಜೆಸಿಬಿ ಮೇಳ ಮಾಡುತ್ತೇವೆ, ಅಗತ್ಯ ಬಿದ್ದರೆ ಹೋರಾಟ ಸಮಿತಿಯನ್ನೂ ಮಾಡುತ್ತೇವೆ ಎಂದು ಜೆಸಿಬಿ, ಹಿಟಾಚಿ ಮಾಲಕರಿಗೆ, ಆಪರೇಟರ್‌ಗಳಿಗೆ ಧೈರ್ಯ ನೀಡಿದ ಹೇಮನಾಥ ಶೆಟ್ಟಿಯವರು ನಿಮ್ಮನ್ನು ಇಲ್ಲಿಂದ ಓಡಿಸುವವರು ಹುಟ್ಟಿಲ್ಲ, ನೀವು ಹೆದರಬೇಡಿ ಎಂದು ಹೇಳಿದರು.

ಪುರಸಭೆಯ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ ಇನ್ನೊಬ್ಬರ ಬದುಕಿನಲ್ಲಿ ಕೈಹಾಕುವ ಹಕ್ಕು ಯಾರಿಗೂ ಇಲ್ಲ. ಇಂತಹಾ ಕೆಲಸವನ್ನು ಬಿಟ್ಟುಬಿಡಲಿ. ಇಲ್ಲದಿದ್ದಲ್ಲಿ ಅವರಿಗೆ ಉಳಿಗಾಲವಿಲ್ಲ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಮಾತನಾಡಿ ನಮ್ಮ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಜಿಲ್ಲೆಯಾಗಿದ್ದು, ಇಲ್ಲಿನವರು ವಿಶ್ವದಾದ್ಯಂತ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಜಿಲ್ಲೆಗೆ ಅವಮಾನ, ಪಕ್ಕದ ಜಿಲ್ಲೆಯವರು ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡಬಾರದು ಎನ್ನುವವರು ಅವರ ಕುಟುಂಬಸ್ಥರು ಎಲ್ಲಿದ್ದಾರೆ ಎಂಬುವುದನ್ನು ಅರಿತುಕೊಳ್ಳಬೇಕಾಗಿದೆ ಎಂದರು.
ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕರಾದ ಬಾಬು ಶೆಟ್ಟಿ ವೀರಮಂಗಲ ಮಾತನಾಡಿ ಇಲ್ಲಿ ಕೆಲಸ ಮಾಡುತ್ತಿರುವ ಜೆಸಿಬಿ, ಹಿಟಾಚಿಯ ಮಾಲಕರು, ಆಪರೇಟರ್‌ಗಳು ಪಾಕಿಸ್ತಾನ ಅಥವಾ ಬಾಂಗ್ಲಾದೇಶದವರಲ್ಲ, ಎಲ್ಲರೂ ನಮ್ಮ ಭಾರತೀಯರು, ಇಲ್ಲಿ ತೆರಿಗೆ ಕಟ್ಟುವವರು, ಅವರಿಗೆ ಇಲ್ಲಿ ಬದುಕುವ, ನಿರ್ಭೀತಿಯಿಂದ ದುಡಿಯುವ ಹಕ್ಕಿದೆ, ಜೆಸಿಬಿ, ಹಿಟಾಚಿಯವರು ಘಟ್ಟದವರು ಎನ್ನುವ ಕಾರಣಕ್ಕೆ ಇಲ್ಲಿಂದ ಓಡಿಸುವುದಾದರೆ ಇತರ ಇಲಾಖೆಗಳಲ್ಲಿರುವ ಹೊರ ಜಿಲ್ಲೆಯವರನ್ನೂ ಓಡಿಸಿ ನೋಡೋಣ, ಆ ತಾಕತ್ತು ಇವರಿಗಿದೆಯಾ ಎಂದು ಬಾಬು ಶೆಟ್ಟಿ ಸವಾಲೆಸೆದರು.
ಜೆಸಿಬಿ ಮಾಲಕ ಕುಮಾರ್ ಮಾತನಾಡಿ ನಾನು ಸುಮಾರು 20 ವರ್ಷಗಳಿಂದ ಇಲ್ಲಿ ಜೆಸಿಬಿ ಮೂಲಕ ಕೆಲಸ ಮಾಡುತ್ತಿದ್ದೇನೆ. ಇದೀಗ ಇಲ್ಲಿ ಕೆಲವರು ನಮಗೆ ಹಿಂಸೆ, ಬೆದರಿಕೆ ನೀಡುತ್ತಿದ್ದು ನಮ್ಮನ್ನು ವಾಪಸ್ ಊರಿಗೆ ಹೋಗಲು ಹೇಳುತ್ತಿದ್ದಾರೆ, ನಾವು ಇಲ್ಲಿ ದುಡಿಯಬಾರದು ಎನ್ನುವುದು ಯಾವ ನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮನ್ನು ಇಲ್ಲಿಂದ ಓಡಿಸಬೇಕು ಎನ್ನುತ್ತಾರೆ: ಜೆಸಿಬಿ, ಹಿಟಾಚಿಗಳ ಮಾಲಕರು, ಕೆಲಸಗಾರರಾದ ಜೆಸಿಬಿ ಮಾಲಕ ಕುಮಾರ್, ಆನಂದ್, ಹಾಗೂ ಸುಭಾಶ್ಚಂದ್ರ ಮೊದಲಾದವರು ಮಾತನಾಡಿ ನಾವು ಕೆಲಸ ಮಾಡುವ ಸೈಟ್‌ಗೆ ಬಂದು ನಮಗೆ ತೊಂದರೆ ಕೊಡ್ತಾರೆ, ಘಟ್ಟದವರನ್ನು ಓಡಿಸಬೇಕು ಎನ್ನುತ್ತಾರೆ, ನಮಗೆ ಬೆದರಿಕೆ ಹಾಕುತ್ತಾರೆ, ನಮಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದರು. ವೇದಿಕೆಯಲ್ಲಿ ಜೆಸಿಬಿ ಮಾಲಕ ಕುಮಾರ್, ಮುಂಡೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಕೊಳ್ತಿಗೆ ಗ್ರಾ.ಪಂ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಬಾಬು ಶೆಟ್ಟಿ ಸ್ವಾಗತಿಸಿದರು. ಹೊನ್ನಪ್ಪ ಪೂಜಾರಿ ಕೈಂದಾಡಿ ಕಾರ್ಯಕ್ರಮ ನಿರೂಪಿಸಿದರು.