ಉತ್ತರ ಪ್ರದೇಶ: 30 ವರ್ಷಗಳ ಬಳಿಕ ಮುಸ್ಲಿಂ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಗೆದ್ದ ಬಿಜೆಪಿ
ಉತ್ತರಪ್ರದೇಶದ ಮುಸ್ಲಿಂ ಪ್ರಾಬಲ್ಯ ಹೊಂದಿರುವ ಕುಂಡರ್ಕಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದು ಆ ಮೂಲಕ ಬರೋಬ್ಬರಿ 30 ವರ್ಷಗಳ ಬಳಿಕ ಬಿಜೆಪಿ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕುಂಡರ್ಕಿ ಕ್ಷೇತ್ರ ಮುಸ್ಲಿಂ ಬಾಹುಳ್ಯ ಕ್ಷೇತ್ರ. ಇಲ್ಲಿ ಬಿಜೆಪಿಯ ರಾಮ್ ವೀರ್ ಠಾಕೂರ್ 98,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಬಾರಿಸುವ ಮೂಲಕ 30 ವರ್ಷಗಳ ಬಳಿಕ ಭಾರತೀಯ ಜನತಾ ಪಕ್ಷ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.1993ರಲ್ಲಿ ಕುಂಡರ್ಕಿ ಕ್ಷೇತ್ರದಲ್ಲಿ ಬಿಜೆಪಿ ಕೊನೆಯದಾಗಿ ಗೆಲುವು ಸಾಧಿಸಿತ್ತು. 1993ರಲ್ಲಿ ಬಿಜೆಪಿಯ ಚಂದ್ರ ವಿಜಯ್ ಸಿಂಗ್ ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ರಾಮ್ ವೀರ್ ಠಾಕೂರ್ ಅವರು ತಮ್ಮ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಮೊಹಮ್ಮದ್ ರಿಜ್ವಾನ್ ವಿರುದ್ಧ ಜಯ ಸಾಧಿಸಿದ್ದಾರೆ.
ಕುಂಡರ್ಕಿ ಕ್ಷೇತ್ರದಲ್ಲಿ ಶೇ.60ಕ್ಕಿಂತ ಅಧಿಕ ಮುಸ್ಲಿಂ ಜನಸಂಖ್ಯೆ ಹೊಂದಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ
ಕಾನ್ಶಿ ರಾಮ್ ಅವರ ಅಜಾದ್ ಸಮಾಜ ಪಕ್ಷದ ಚಾಂದ್ ಬಾಬು, ಆಲ್ ಇಂಡಿಯಾ ಮಜ್ಲೀಸ್ ಎ ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷದ ಮೊಹಮ್ಮದ್ ವಾರಿಶ್ ಹಾಗೂ ಬಹುಜನ್ ಸಮಾಜ್ ಪಕ್ಷದ ರಫಾತುಲ್ಲಾಹ್ ಸಹಿತ ಒಟ್ಟು 11 ಮಂದಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಕಣದಲ್ಲಿದ್ದರೆ, ಬಿಜೆಪಿ ಏಕೈಕ ಹಿಂದೂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಸಮಾಜವಾದಿ ಪಕ್ಷದ ಮೊಹಮ್ಮದ್ ರಿಜ್ವಾನ್ ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿದ್ದು, ಇಂಡಿಯಾ ಬ್ಲಾಕ್ ಅವರನ್ನು ಕಣಕ್ಕಿಳಿಸಿತ್ತು ಎನ್ನಲಾಗಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣೆಯಲ್ಲಿ ಹೆಚ್ಚುವರಿಯಾಗಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ರಾಮ್ ವೀರ್ ಠಾಕೂರ್ ಕೂಡಾ ಮುಸ್ಲಿಂ ಮತದಾರರ ಮನಗೆಲ್ಲುವಲ್ಲಿ ಪ್ರಯತ್ನಿಸಿದ್ದರು ಎಂದು ವರದಿ ತಿಳಿಸಿದೆ.