ನಮ್ಮ ಪಕ್ಷ ಅವರ ಪರವಾಗಿ ನಿಂತರೂ ಆ ಸಮುದಾಯ ನಮ್ಮ ಕೈ ಹಿಡಿಯಲಿಲ್ಲ: ನಿಖಿಲ್
‘ಹಿಂದಿನಿಂದಲೂ ನಮ್ಮ ಜೊತೆಗಿದ್ದ ಆ ಸಮುದಾಯ ಈ ಸಲ ನಮ್ಮ ಕೈ ಹಿಡಿಯಲಿಲ್ಲ’ ಎಂದು ಚನ್ನಪಟ್ಟಣ ಉಪ ಚುನಾವಣೆಯ ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡೂ ಪಕ್ಷಗಳ ಕಾರ್ಯಕರ್ತರು ಯೋಧರಂತೆ ಕೆಲಸ ಮಾಡಿದರು. ಸೋಲು ಮತ್ತು ಗೆಲುವಿಗೆ ತನ್ನದೇ ಆದ ಕಾರಣಗಳಿರುತ್ತವೆ’ ಎಂದರು.
‘ಬಹುಶಃ ಒಂದು ಸಮುದಾಯದ ಮತಗಳು ಕಾಂಗ್ರೆಸ್ ಪರ ಕ್ರೋಢಿಕರಣಗೊಂಡವು. ನಮ್ಮ ಪಕ್ಷ ಅವರ ಪರವಾಗಿ ನಿಂತರೂ, ಮೀಸಲಾತಿ ಸೇರಿದಂತೆ ಎಷ್ಟೇ ಕೊಡುಗೆಗಳನ್ನು ನೀಡಿದರೂ ಅವರು ನಮ್ಮ ಕೈ ಹಿಡಿದಿಲ್ಲ. ಸಮುದಾಯವನ್ನು ಇದುವರೆಗೆ ನಾವು ನಂಬಿಕೊಂಡು ಬಂದಿದ್ದೆವು. ಈ ಸಲ ಅವರು ನಮ್ಮೊಂದಿಗೆ ನಿಲ್ಲದಿರುವುದು ಸಹ ಫಲಿತಾಂಶದ ಏರುಪೇರಿಗೆ ಕಾರಣವಿರಬಹುದು. ಅವರನ್ನು ಮೀರಿಯು ಪಕ್ಷದ ಬದ್ದ ಕಾರ್ಯಕರ್ತರಿದ್ದಾರೆ. ಅವರೇ ನಮ್ಮ ಬೆನ್ನೆಲುಬು. ಅವರು ಎಂದಿನಂತೆ ಈ ಚುನಾವಣೆಯಲ್ಲೂ ನಮ್ಮ ಕೈ ಹಿಡಿದಿದ್ದಾರೆ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ನಿಖಿಲ್ ಅವರು ಒಂದು ಸಮುದಾಯ ಎನ್ನುವ ಮೂಲಕ ಮುಸ್ಲಿಮರು ತನಗೆ ಮತ ನೀಡಿಲ್ಲ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.