ಚನ್ನಪಟ್ಟಣ: ಕಾಂಗ್ರೆಸ್ ಗೆಲುವಿನ ಹಿಂದೆ ಜಮೀರ್ ಅಹ್ಮದ್
ಬೆಂಗಳೂರು: ಕರ್ನಾಟಕ ವಿಧಾನಸಭಾ ಉಪ ಚುಣಾವಣೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಈ ಮೂರೂ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಎದುರಾಳಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಶಾಕ್ ನೀಡಿದೆ.
ಮುಖ್ಯವಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಳಸಿದ್ದ ಪದ ಬಳಕೆಯೊಂದು ಭಾರೀ ವಿವಾದಕ್ಕೀಡಾಗಿದ್ದಲ್ಲದೇ ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ಜಮೀರ್ ಅವರ ಹೇಳಿಕೆಯನ್ನು ಖಂಡಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರೂ ಜಮೀರ್ ಹೇಳಿಕೆ ಕುರಿತು ಅಸಮಾಧಾನ ಹೊರ ಹಾಕಿದ್ದರು. ಜಮೀರ್ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎನ್ನುವುದು ಕಾಂಗ್ರೆಸಿನೊಳಗಿನ ಲೆಕ್ಕಾಚಾರವಾಗಿತ್ತು, ಒಂದು ವೇಳೆ ಸೋತರೆ ಆ ಸೋಲನ್ನು ಜಮೀರ್ ತಲೆಗೆ ಕಟ್ಟುವ ಸಾಧ್ಯತೆಯೂ ಇತ್ತು.
ಇದೀಗ ಕಾಂಗ್ರೆಸ್ ಗೆಲುವಿನ ಕೇಕೆ ಹಾಕಿದೆ, ಜಮೀರ್ ಹೇಳಿಕೆ ದುಬಾರಿಯಾಗಲಿದೆ ಎಂದಿದ್ದ ಕಾಂಗ್ರೆಸ್ ಈ ಗೆಲುವಿನ ಕ್ರೆಡಿಟ್‌ನ್ನು ಜಮೀರ್‌ಗೆ ನೀಡುತ್ತಾ ಎಂದು ಕಾಂಗ್ರೆಸ್ ಕಾರ್ಯರ್ತರು ಜಾಲತಾಣಗಳಲ್ಲಿ ಚರ್ಚೆ ಮಾಡಿದ್ದಾರೆ. ಒಟ್ಟಾರೆಯಾಗಿ ಚನ್ನಪಟ್ಟಣದಲ್ಲಿ ಭರ್ಜರಿ ಪ್ರಚಾರ ನಡೆಸಿಯೂ ತಮ್ಮ ಹೇಳಿಕೆಯೊಂದರಿಂದ ಕೆಂಗಣ್ಣಿಗೆ ಗುರಿಯಾಗಿದ್ದ ಸಚಿವ ಜಮೀರ್ ಇದೀಗ ಹೀರೋ ಆಗಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ.