ಕಟ್‌ಕನ್ವರ್ಶನ್ ಸಮಸ್ಯೆ: ನಗರಾಡಳಿತ ಆಯುಕ್ತರ ಜೊತೆ ಚರ್ಚೆ
ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಸಮಸ್ಯೆಯಾಗಿಯೇ ಉಳಿದಿರುವ ಕಟ್‌ಕನ್ವರ್ಶನ್ ವಿಚಾರಕ್ಕೆ ಸಂಬಂದಿಸಿದಂತೆ ಗುರುವಾರ ನಗರಾಡಳಿತ ಆಯುಕ್ತರ ಜೊತೆ ಶಾಸಕರು ಮಾತುಕತೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿರುವ ನಗರಾಡಳಿತ ಆಯುಕ್ತರಾದ ವೆಂಕಟಾಚಲಯ್ಯ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು ಕಟ್ ಕನ್ವರ್ಶನ್ ಸಮಸ್ಯೆಯಿಂದ ನಗರಸಭಾ ವ್ಯಾಪ್ತಿಯಲ್ಲಿ ತೀವ್ರ ಸಮಸ್ಯೆಯಾಗಿದ್ದು ಈ ವಿಚಾರದ ಬಗ್ಗೆ ವಿಧಾನಸಭಾ ಅಧಿವೇಶನದಲ್ಲೂ ಚರ್ಚೆ ನಡೆಸಲಾಗಿದೆ. ಈ ಸಮಸ್ಯೆಯನ್ನು ಇತ್ಯರ್ಥಪಡಿಸುವ ಭರವಸೆ ನೀಡಿದ್ದರೂ ಇಲ್ಲಿಯ ತನಕ ಇತ್ಯರ್ಥವಾಗಿಲ್ಲ ಎಂದು ಅಧಿಕಾರಿಗೆ ತಿಳಿಸಿದರು. ಈ ಬಗ್ಗೆ ಚರ್ಚಿಸಿ ಶೀಘ್ರವೇ ಕ್ರಮಕೈಗೊಳ್ಳಲಾಗುವುದು, ಮಂಗಳೂರು ನಗರ ಪಾಲಿಕಾ ವ್ಯಾಪ್ತಿಯಲ್ಲಿ ಯಾವ ರೀತಿಕಟ್ ಕನ್ವರ್ಶನ್ ನಡೆಯುತ್ತಿದೆ ಎಂಬುದರ ಬಗ್ಗೆ ಪರಿಶೀಲಿಸಿ ಪುತ್ತೂರಿಗೂ ಇದನ್ನು ವಿಸ್ತರಿಸುವ ಬಗ್ಗೆ ಶೀಘ್ರ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಲ್ಯಾನ್ಸಿಮಸ್ಕರೇನಸ್ ಮತ್ತು ಅನ್ವರ್ ಖಾಸಿಂ ಉಪಸ್ಥಿತರಿದ್ದರು.
9/11 ಖಾತೆ 185 ಅರ್ಜಿ ಇತ್ಯರ್ಥ
ಪುತ್ತೂರು ತಾಲೂಕು ವ್ಯಾಪ್ತಿಯ ಒಟ್ಟು304 9/11 ಅರ್ಜಿಗಳ ಪೈಕಿ 185 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಗ್ರಾಮಾಂತರ ಭಾಗದಿಂದ ಬರುವ ಬಹುತೇಕ ಅರ್ಜಿಗಳು ವಿಲೇವಾರಿಯಲ್ಲಿ ವೇಗತೆಯನ್ನು ಪಡೆದುಕೊಂಡಿದ್ದು ಈ ವಿಚಾರದಲ್ಲಿ ಎಲ್ಲಿಯೂ ಸಮಸ್ಯೆಗಳಿಲ್ಲ ಎಂದು ಪುಡಾ ಸದಸ್ಯ ಅನ್ವರ್ ಖಾಸಿಂ ತಿಳಿಸಿದ್ದಾರೆ.