ಅಶೋಕ್ ರೈ ಬೆಂಗಳೂರಿಗೆ ಬಂದು ಸಿಎಂ ಜೊತೆ ಜಗಳ ಮಾಡ್ತಾರೆ: ಡಿಕೆಶಿ
ಪುತ್ತೂರು: ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿ ಬಹಳ ಸ್ಪೀಡ್ ಇದ್ದಾರೆ, ಅಷ್ಟು ಸ್ಪೀಡ್ ಬೇಡ, ಎಲ್ಲವನ್ನೂ ಹಂತ ಹಂತವಾಗಿ ಮಾಡಿಕೊಂಡು ಹೋಗುವ ಎಂದು ನಾನು ಅವರಿಗೆ ಹೇಳಿದ್ದೆ, ಪುತ್ತೂರಿನ ಮಹಾಜನತೆಗೆ ಬಳಿ ಒಂದು ವಿಚಾರ ಹೇಳಬೇಕಿದೆ. ಅಶೋಕ್ ರೈಯನ್ನ ವಿಧಾನಸೌಧಕ್ಕೆ ಕಳಿಸಿದ್ದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಬೇರೆ ಪಕ್ಷದಿಂದ ಬಂದರೂ ಅವರಿಗೆ ಕಾರ್ಯಕರ್ತರು ಸಹಕಾರ ಕೊಟ್ಟಿದ್ದಾರೆ. ಅವರು ನಿಮ್ಮ(ಕ್ಷೇತ್ರದ ಅಭಿವೃದ್ಧಿ) ಕೆಲಸಕ್ಕಾಗಿ ಆಗಾಗ ಬೆಂಗಳೂರಿಗೆ ಬಂದು ಸಿಎಂ ಜೊತೆ ಜಗಳ ಮಾಡುತ್ತಾರೆ. ಯಶಸ್ಸು ಕಾಣಲು ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಕೃಷ್ಣನ ತಂತ್ರ ಇರಬೇಕು. ಅದು ಅಶೋಕ್ ರೈಯಲ್ಲಿ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ನವೆಂಬರ್ 2 ರಂದು ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಬೃಹತ್ ವಸ್ತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೆಲವರು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ. ಆದರೆ ನಮ್ಮದು ಬದುಕಿನ ಮೇಲೆ ರಾಜಕಾರಣ. ನಾವು ಐದು ಗ್ಯಾರಂಟಿ ಕೊಟ್ಟಿರುವ ಕಾರಣ ಎಲ್ಲರ ಕೈ ಗಟ್ಟಿಯಾಗಿದೆ. ಬಿಜೆಪಿ, ದಳ, ಕಾಂಗ್ರೆಸ್ ಅಂತ ಹೇಳದೇ ಜನರಿಗೆ ಗ್ಯಾರಂಟಿ ತಲುಪುತ್ತಿದೆ. ನಾವು ಜನರಿಗೆ ಸಹಾಯ ಮಾಡುತ್ತಾ ಇದ್ದೇವೆ ಎಂದು ಅವರು ಹೇಳಿದರು.
ಸಂಜೆಯಾದ ಮೇಲೆ ಮಂಗಳೂರು ಡ್ರೈ ಸಿಟಿಯಾಗಿದೆ. ಕೋಮುಗಲಭೆ ಬಳಿಕ ಇಲ್ಲಿ ಕೊಂಚ ಅಭಿವೃದ್ಧಿ ಕಡಿಮೆ ಆಗಿದೆ. ವಿದ್ಯಾ ಸಂಸ್ಥೆಗಳಿದ್ದರೂ ಗಲಾಟೆ ಕಾರಣದಿಂದ ಮಕ್ಕಳು ಬರಲು ಭಯಪಡುತ್ತಾ ಇದ್ದಾರೆ. ಇಲ್ಲಿನವರು ದುಬೈ, ಮುಂಬೈಗೆ ಹೋಗುತ್ತಾ ಇದ್ದಾರೆ. ಹಾಗಾಗಿ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಿದೆ. ಕರಾವಳಿಗೆ ಪ್ರತ್ಯೇಕ ನೀತಿ ಹಾಗೂ ಟೂರಿಸಂ ಪಾಲಿಸಿ ರೂಪಿಸುತ್ತೇವೆ. ಮನಸ್ಸಿನ ಅಶಾಂತಿ ಇಲ್ಲದಾಗಿಸಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕಿದೆ ಎಂದು ಅವರು ಹೇಳಿದರು