ಉಪ್ಪಿನಂಗಡಿ: ಬೇರಿಕೆಯಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರ
ಪುತ್ತೂರು: ಉಪ್ಪಿನಂಗಡಿ ಸಮೀಪದ ಶಾಂತಿನಗರ ಬೇರಿಕೆ ಸಮೀಪ ವಾಸಿಸುತ್ತಿರುವ ಖತೀಜಮ್ಮ ಮತ್ತು ಅವರ ಪುತ್ರಿ ಬಡತನದಲ್ಲಿ ಸುಮಾರು ವರ್ಷಗಳಿಂದ ಜೀವನ ನಡೆಸುತ್ತಿದ್ದು, ವಾಸಿಸಲು ಸರಿಯಾದ ಮನೆ ಇಲ್ಲದೇ ತೊಂದರೆಗೆ ಸಿಲುಕಿದ್ದರು. ಇದನ್ನು ಮನಗಂಡು ಊರಿನ ಯುವಕರು “ಮಾಷಾ ಅಲ್ಲಾಹ್” ಎಂಬ ವಾಟ್ಸಪ್ ಗ್ರೂಪ್ ರಚಿಸಿ ದಾನಿಗಳ ಸಹಾಯ ಪಡೆದು ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿದ್ದು ಅದನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಇದರ ಉಸ್ತುವಾರಿಯನ್ನು ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ನಾಸಿರ್ ಫೈಝಿ ಕುಂತೂರು ವಹಿಸಿದ್ದರು. ಊರ ಪರವೂರ ದಾನಿಗಳು, ಜಮಾಅತ್ ಸಮಿತಿ ಪದಾಧಿಕಾರಿಗಳು ಸಹಕಾರ ನೀಡಿದ್ದರು.
ಮನೆ ಹಸ್ತಾಂತರದ ವೇಳೆ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು. ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.