ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ. ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ಮೂರನೇ ವಾರಕ್ಕೆ ಕಾಲಿಟ್ಟಿರುವ ಮಧ್ಯೆ ಬಿಗ್ ಬಾಸ್ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಈ ಘೋಷಣೆ ಮಾಡಿದ್ದಾರೆ.
ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಅವರು ಈಗ ಶೋ ತೊರೆಯುವ ನಿರ್ಧಾರಕ್ಕೆ ಬಂದಿದ್ದು ಮುಂದಿನ ಸೀಸನ್ಗೆ ನಾನು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ಅಧಿಕೃತವಾಗಿ ಈ ನಿರ್ಧಾರ ತಿಳಿಸಿದ್ದಾರೆ. ಅವರ ಈ ಪೋಸ್ಟ್ ನೋಡಿ ಅವರ ಅಭಿಮಾನಿಗಳಿಗೆ ಮತ್ತು ಬಿಗ್ ಬಾಸ್ ಶೋ ವೀಕ್ಷಕರಿಗೆ ಅಚ್ಚರಿ ಉಂಟಾಗಿದೆ.
‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ’ ಎಂದು ಸುದೀಪ್ ಹೇಳಿದ್ದಾರೆ.