ಡಿಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಕ್ರಿಕೆಟಿಗ ಸಿರಾಜ್ ಮುಂದಿನ ನಡೆ ಏನು?
2024ರ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ತೆಲಂಗಾಣದ ಏಕೈಕ ಆಟಗಾರನಾಗಿದ್ದ ಮೊಹಮ್ಮದ್ ಸಿರಾಜ್ ಗೆ ತೆಲಂಗಾಣ ಸರ್ಕಾರ ಡಿಎಸ್ಪಿ ಹುದ್ದೆ ನೀಡಿ ಗೌರವಿಸಿದೆ.
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತೆಲಂಗಾಣದ ಡೆಪ್ಯೂಟಿ ಸೂಪರಿಂಟೆಂಡಂಟ್ ಅಫ್ ಪೊಲೀಸ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾಡಿದ ಸಾಧನೆಗಾಗಿ ತೆಲಂಗಾಣ ಸರ್ಕಾರ ಸಿರಾಜ್ ಅವರಿಗೆ ಗೌರವಾನ್ವಿತ ಡಿಎಸ್ಪಿ ಹುದ್ದೆ ನೀಡಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಸಿರಾಜ್ ಅವರಿಗೆ ಗೌರವಾನ್ವಿತ ಡಿಎಸ್ಪಿ ಹುದ್ದೆ ನೀಡಲು ಹಾಗೂ ಜಮೀನು ಮಂಜೂರು ಮಾಡಲು ನಿರ್ದೇಶಿಸಿದ್ದರು. ಅದರಂತೆ ಅ.11ರಂದು ಮೊಹಮ್ಮದ್ ಸಿರಾಜ್ ಡಿಎಸ್ಪಿ ಹುದ್ದೆಯನ್ನು ಅಲಂಕರಿಸಿದ್ದಾರೆ.
ಸರ್ಕಾರಿ ಉದ್ಯೋಗ ಸಿಕ್ಕ ಹಿನ್ನಲೆಯಲ್ಲಿ ಸಿರಾಜ್ ಅವರಿಗೆ ರೂ.1 ಲಕ್ಷಕ್ಕೂ ಅಧಿಕ ವೇತನ ಸಿಗಲಿದೆ. ಸಿರಾಜ್ ಅವರಿಗೆ ನೀಡಲಾದ ಈ ಹುದ್ದೆಯನ್ನು ಅವರು ಯಾವಾಗ ಬೇಕಿದ್ದರೂ ಅಲಂಕರಿಸಬಹುದು. ಟೀಮ್ ಇಂಡಿಯಾದಿಂದ ನಿವೃತ್ತರಾದ ಬಳಿಕ ಅವರು ಡಿಎಸ್ಪಿ ಆಗಿ ಕಾರ್ಯ ನಿರ್ವಹಿಸಬಹುದು.
ಸಿರಾಜ್ ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೇ ಕಾಣಿಸಿಕೊಳ್ಳಲಿದ್ದು ಕ್ರಿಕೆಟ್ ನಿಂದ ನಿವೃತ್ತಿಯ ಬಳಿಕ ಅವರು ಡಿಎಸ್ಪಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಅದಕ್ಕೂ ಮೊದಲು ಅವರು 2 ವರ್ಷಗಳ ಪೊಲೀಸ್ ಟ್ರೈನಿಂಗ್ ಕೂಡ ಮುಗಿಸಬೇಕಿದೆ. ಇದಾದ ಬಳಿಕವಷ್ಟೇ ಅವರು ಅಧಿಕೃತವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವಹಿಸಿಕೊಳ್ಳಬಹುದಾಗಿದೆ ಎಂದು ತಿಳಿದು ಬಂದಿದೆ. ಸಿರಾಜ್ ಅವರು ಡಿಎಸ್ಪಿ ಹುದ್ದೆ ಅಲಂಕರಿಸಿದ ಬಳಿಕ ಹಲವರು, ಸಿರಾಜ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಾರೆ ಎಂದೆಲ್ಲಾ ಹೇಳಿಕೊಂಡಿದ್ದರು, ಆದರೆ ಅದು ಸತ್ಯಕ್ಕೆ ದೂರವಾದ ವಿಚಾರ.