ಕ್ರೈಂರಾಷ್ಟ್ರೀಯ

ಆಧಾರ್ ಕಾರ್ಡ್ ಲಿಂಕ್ ಮಾಡುವ ಮುನ್ನ ಹುಷಾರ್…!
ಆಧಾರ್ ನಂಬರ್ ಬಳಸಿಕೊಂಡು ಬ್ಯಾಂಕ್ ಖಾತೆಯ ಹಣ ಎಗರಿಸುವ ಖದೀಮರಿದ್ದಾರೆ ಎಚ್ಚರ..!ಪುತ್ತೂರು: ಡಿಜಿಟಲೀಕರಣ ಹೆಚ್ಚಾಗುತ್ತಿದ್ದಂತೆ ನಾಗರೀಕರು ವಂಚನೆಗೆ ಒಳಗಾಗುತ್ತಿರುವುದು ಕೂಡ ಹೆಚ್ಚುತ್ತಿದೆ. ಆನ್‌ಲೈನ್‌ನಲ್ಲಿ ವ್ಯವಹಾರಗಳು ಜಾಸ್ತಿಯಾಗಿ ಜನರು ಆನ್‌ಲೈನ್ ಮೂಲಕವೇ ವಂಚನೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಹಣದ ವಿಚಾರದಲ್ಲಿ ಹೆಚ್ಚಾಗಿ ಮೋಸ ಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಸೈಬರ್ ವಂಚನೆಯು ನಿರಂತರವಾಗಿ ಅಪ್‌ಡೇಟ್ ಆಗುತ್ತಿದ್ದು ಒಟಿಪಿ, ಸಿವಿವಿ ಸಂಖ್ಯೆಗಳು ಮತ್ತು ಬ್ಯಾಂಕ್ ವಿವರಗಳನ್ನು ವಂಚಕರು ಸದ್ದಿಲ್ಲದೆ ಕದಿಯುತ್ತಿದ್ದಾರೆ. ವಂಚಕರು ಹೊಸ ಹೊಸ ತಂತ್ರಗಳನ್ನು ಬಳಸಿಕೊಂಡು ಜನರನ್ನು ದೋಚುತ್ತಿದ್ದಾರೆ. ಇದೀಗ ವಂಚಕರು ಜನರ ಆಧಾರ್ ನಂಬರ್ ಬಳಸಿಕೊಂಡು ಅವರ ಬ್ಯಾಂಕ್ ಖಾತೆಯ ಹಣ ಎಗರಿಸುತ್ತಿರುವ ಘಟನೆಗಳು ನಡೆಯುತ್ತಿದೆ.

ಸಾಂದರ್ಭಿಕ ಚಿತ್ರ

ಆಧಾರ್ ಕಾರ್ಡ್‌ನಿಂದ ಬೆರಳಚ್ಚು ಮೂಲಕ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್( ಎಇಪಿಎಸ್) ಬಳಸಿ ಬ್ಯಾಂಕ್‌ಗಳಿಂದ ಹಣ ಡ್ರಾ ಮಾಡುವ ವಂಚಕರ ಜಾಲ ಹೆಚ್ಚಾಗಿದ್ದು ಈಗಾಗಲೇ ಹಲವು ಕಡೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಎಇಪಿಎಸ್ ವಿಧಾನದಿಂದ ಗ್ರಾಹಕರಿಗೆ ತಿಳಿಯದಂತೆ ಖಾತೆಗಳಿಂದ ಹಣವನ್ನು ಕದಿಯಲಾಗುತ್ತದೆ.
ಆಧಾರ್ ನಂಬರ್ ಬಳಸಿಕೊಂಡು ಖಾತೆಯ ಹಣ ಎಗರಿಸುತ್ತಾರೆ ಖದೀಮರು!
ಆಧಾರ್ ಸಂಖ್ಯೆಗಳನ್ನು ಬಳಸಿಕೊಂಡು ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ನಕಲು ಮಾಡುವ ಮೂಲಕ ವಂಚಕರು ವ್ಯಕ್ತಿಗಳ ಖಾತೆಗಳಿಂದ ಹಣವನ್ನು ಎಗರಿಸುತ್ತಿದ್ದಾರೆ. ಇದಕ್ಕೆ ಯಾವುದೇ ಒಟಿಪಿ ಬೇಕಾಗಿರುವುದಿಲ್ಲ. ತಮ್ಮ ಆಧಾರ್ ಸಂಖ್ಯೆ ಇದ್ದರೆ ಅದನ್ನು ಬಳಸಿಕೊಂಡು ನಾವು ಆಧಾರ್ ಲಿಂಕ್ ಮಾಡಿದ ಫಿಂಗರ್‌ಪ್ರಿಂಟ್‌ಗಳನ್ನು ನಕಲು ಮಾಡಿ ಅಕೌಂಟ್‌ನಲ್ಲಿರುವ ಹಣವನ್ನು ಖದಿಯುತ್ತಾರೆ. ವಿಚಿತ್ರವೆಂದರೆ ವಂಚಕರು ಖಾತೆಯಿಂದ ಹಣವನ್ನು ಹಿಂಪಡೆದಿದ್ದರೂ ಕೂಡಾ ಬ್ಯಾಂಕ್‌ನಿಂದ ಯಾವುದೇ ಮೆಸೇಜ್ ಅಕೌಂಟ್‌ದಾರರಿಗೆ ಹೋಗುವುದಿಲ್ಲ, ಪಾಸ್‌ಬುಕ್ ಅನ್ನು ಅಪ್‌ಡೇಟ್ ಮಾಡುವವರೆಗೂ ಬ್ಯಾಂಕ್ ಖಾತೆಯಿಂದ ವಂಚಕರು ಹಣವನ್ನು ಎಗರಿಸಿದ್ದಾರೆ ಎಂಬುವುದೇ ಗೊತ್ತಾಗುವುದಿಲ್ಲ ಅಂತಹ ಗಿಮಿಕ್ ಮೂಲಕ ವಂಚಕರು ವಂಚನೆ ಮಾಡುತ್ತಿರುವುದು ಕಂಡು ಬಂದಿದೆ.

ಆಧಾರ್ ದುರ್ಬಳಕೆ ತಡೆಯುವುದು ಹೇಗೆ…
ಎಲ್ಲಾ ಸೈಟ್‌ಗಳಲ್ಲಿ ಅಥವಾ ಫಾರ್ಮ್‌ಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸದಿರಿ. ಎಲ್ಲಿ ನಿಮ್ಮ ಗುರುತಿನ ಪುರಾವೆ ಮುಖ್ಯವಾಗಿರುತ್ತದೆಯೋ ಅಲ್ಲಿ ಆಧಾರ್ ಕಾರ್ಡ್ ಬದಲಾಗಿ ಬೇರೆ ಕಾರ್ಡ್‌ಗಳನ್ನು ಬಳಕೆ ಮಾಡಿ. ಅಂದರೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮೊದಲಾದವುಗಳನ್ನು ನಿಮ್ಮ ಗುರುತಿನ ಪುರಾವೆಯಾಗಿ ಬಳಕೆ ಮಾಡಿಕೊಳ್ಳಬಹುದು. ಅಧಿಕೃತವಾದ ಅಧಿಕಾರಿಗಳಿಗೆ ಅಥವಾ ಅಧಿಕೃತವಾದ ಸಂಸ್ಥೆಗಳಿಗೆ ಮಾತ್ರ ನೀವು ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಿ. ಹಾಗೆಯೇ ನೀವು ಈ ದಾಖಲೆಗಳನ್ನು ನೀಡುವ ಸಂದರ್ಭದಲ್ಲಿ ದಾಖಲೆ ನೀಡಿದ ದಿನಾಂಕವನ್ನು ಉಲ್ಲೇಖಿಸಿ ಸಹಿ ಮಾಡಿ.  ಸಾಮಾಜಿಕ ಜಾಲತಾಣದಲ್ಲಿ, ಆನ್‌ಲೈನ್ ಪೋರ್ಟಲ್‌ಗಳಲ್ಲಿ ನಿಮ್ಮ ಪೂರ್ಣ ಹೆಸರನ್ನು ಹಾಕುವುದನ್ನು ತಪ್ಪಿಸಿ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನು ಹಾಕದಿರುವುದು ಉತ್ತಮ. ಸರ್ಕಾರವು ಯಾವುದೇ ಒಂದು ದಾಖಲೆಗೆ ಅಥವಾ ಪೋರ್ಟಲ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಿಲ್ಲವಾದ್ದಲ್ಲಿ, ನೀವಾಗಿಯೇ ಎಲ್ಲಿಯೂ ಲಿಂಕ್ ಮಾಡಿಕೊಳ್ಳಬೇಡಿ ಯಾವುದೇ ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ, ಕೂಡಲೇ ಡಿ-ಲಿಂಕ್ ಮಾಡಿಕೊಳ್ಳಿ. ನಿಮ್ಮ ಹೆಸರಲ್ಲಿ ಯಾವುದೇ ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗಿದೆಯೇ ಅಥವಾ ನಿಮ್ಮ ಹೆಸರಲ್ಲಿ ಯಾರಾದರೂ ಸಾಲವನ್ನು ಪಡೆದಿದ್ದಾರೆಯೇ ಎಂದು ತಿಳಿಯಲು ಕ್ರೆಡಿಟ್ ರಿಪೋರ್ಟ್ ಅನ್ನು ಆಗಾಗೆ ಪರಿಶೀಲನೆ ಮಾಡಿಕೊಳ್ಳಿ. ನಿಮ್ಮ ಮೊಬೈಲ್‌ನಲ್ಲಿ ಆಧಾರ್ ಕಾರ್ಡ್‌ನ ಫೋಟೋವನ್ನು ಇಟ್ಟುಕೊಳ್ಳುವುದು ಸುರಕ್ಷಿತವಲ್ಲ. ನಿಮ್ಮ ಫೋನ್ ಕಳೆದುಹೋದಲ್ಲಿ ನಿಮ್ಮ ಫೋನ್‌ನಲ್ಲಿರುವ ನಿಮ್ಮ ಪ್ರಮುಖ ದಾಖಲೆಗಳನ್ನು ಸುಲಭವಾಗಿ ದುರ್ಬಳಕೆ ಮಾಡಲು ಸಾಧ್ಯವಾಗಲಿದೆ.

ಆಧಾರ್ ಲಾಕ್ ಮಾಡಿಕೊಳ್ಳಿ:
ಆಧಾರ್ ಕಾರ್ಡ್‌ನಿಂದ ಬೆರಳಚ್ಚು ಮೂಲಕ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್( ಎಇಪಿಎಸ್) ಬಳಸಿ ಬ್ಯಾಂಕ್‌ಗಳಿಂದ ಹಣ ಡ್ರಾ ಮಾಡುವ ವಂಚಕರ ಜಾಲ ಹೆಚ್ಚಾಗಿದ್ದು ಆದ್ದರಿಂದ ಗ್ರಾಹಕರು ತಮ್ಮ ಆಧಾರ್ ಕಾರ್ಡ್‌ಗೆ ಲಾಕ್ ಮಾಡಿಸಿಕೊಳ್ಳುವುದು ಸೂಕ್ತ. ಈ ಎಇಪಿಎಸ್ ಸಿಸ್ಟಮ್ ಮೂಲಕ ಒಮ್ಮೆಗೆ ರೂ.ಸಾವಿರ ತನಕ ಹಣ ಡ್ರಾ ಮಾಡಬಹುದಾಗಿದೆ. ನಾವು ಆಧಾರ್ ಲಿಂಕ್ ಮಾಡುವ ಮುನ್ನ ಬಹಳಷ್ಟು ಎಚ್ಚರ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ನಾವು ಆಧಾರ್ ಲಿಂಕ್ ಮಾಡಿದ ಸಂದರ್ಭದಲ್ಲಿ ನಾವು ಕೊಡುವ ಬೆರಳಚ್ಚು ಅನ್ನು ನಕಲು ಮಾಡಿಕೊಂಡು ವಂಚಕರು ಹಣ ಕದಿಯುತ್ತಾರೆ. ಇದನ್ನು ತಪ್ಪಿಸಬೇಕಾದರೆ ನಾವು ನಮ್ಮ ಮೊಬೈಲ್‌ನಲ್ಲೇ ಮೈ ಆಧಾರ್‌ಗೆ ಹೋಗಿ ಅಲ್ಲಿ ಲಾಗ್‌ಇನ್ ಆಗಿ ಆಧಾರ್ ಲಾಕ್ ಮಾಡಿಸಿಕೊಳ್ಳುವುದು ಸೂಕ್ತ. ನಮಗೆ ಬೇಕಾದ ಸಂದರ್ಭದಲ್ಲಿ ಮತ್ತೆ ಆಧಾರ್ ಅನ್‌ಲಾಕ್ ಮಾಡಿಸಿಕೊಳ್ಳುವುದು ಉತ್ತಮ.

Leave a Reply

Your email address will not be published. Required fields are marked *

error: Content is protected !!