ಕರಾವಳಿ

ಮುಮ್ತಾಜ್ ಅಲಿ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ



ಮಂಗಳೂರು: ಉದ್ಯಮಿ, ಸಾಮಾಜಿಕ ಮುಂದಾಳು ಮುಮ್ತಾಜ್ ಅಲಿ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ. ಮಹಿಳೆ ಸಹಿತ ಒಂದು ಪರಿಚಿತರ ತಂಡ ನಿರಂತರವಾಗಿ ಕಿರುಕುಳ, ಮಾನಸಿಕ ಹಿಂಸೆ, ಬೆದರಿಕೆ, ಬ್ಲ್ಯಾಕ್ ಮೇಲ್ ಮಾಡಿದ ಕಾರಣಕ್ಕೆ ಮುಮ್ತಾಜ್ ಅಲಿ ತನ್ನ ಜೀವವನ್ನೇ ಅಂತ್ಯಗೊಳಿಸಿದ್ದಾರೆ, ಅವರ ಸಾವಿಗೆ ಕಠಿಣ ಶಿಕ್ಷೆ ವಿಧಿಸುವುದರ ಜೊತೆಗೆ  ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್ ಬಗ್ಗೆ ಕೂಲಂಕುಷ ತನಿಖೆ ಆಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಮುಮ್ತಾಜ್ ಅಲಿ ಎಲ್ಲ ಸಮುದಾಯದವರ ಜೊತೆ ಆತ್ಮೀಯವಾಗಿದ್ದು ದ.ಕ ಜಿಲ್ಲೆಯಲ್ಲಿ ನಡೆಯುವ ಮುಸ್ಲಿಂ ಸಮುದಾಯದ ಅನೇಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದರು. ಮಾತ್ರವಲ್ಲದೆ ಓರ್ವ ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು. ಸಾಮಾಜಿಕ ಮುಖಂಡರೊಂದಿಗೆ, ಧಾರ್ಮಿಕ ಪಂಡಿತರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಯಾರಿಗೂ ಕೇಡು ಬಯಸದ ಸಾಧ್ಯವಾದಷ್ಟು ತನ್ನಿಂದ ಉಪಕಾರವನ್ನೇ ಮಾಡುತ್ತಾ ಬಂದಿರುವ ಮುಮ್ತಾಜ್ ಅಲಿ ಅವರಿಗೆ ಈ ಸ್ಥಿತಿ ಬಂತಲ್ಲಾ ಎಂದು ಅವರನ್ನು ಬಲ್ಲವರು ಹೇಳಿಕೊಂಡಿದ್ದಾರೆ. ಮುಮ್ತಾಜ್ ಅಲಿ ಸಾವಿಗೆ ಸಾವಿರಾರು ಮಂದಿ ಸಂತಾಪ ಸೂಚಿಸಿದ್ದು ಹಲವರು ಕಣ್ಣೀರು ಸುರಿಸಿದ್ದಾರೆ.

ದ.ಕ ಜಿಲ್ಲೆಯಲ್ಲಿ ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್ ಪ್ರಕರಣಗಳು ನಡೆಯುತ್ತಿದ್ದು ಕೆಲವು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿದೆ, ಅನೇಕ ಪ್ರಕರಣಗಳು ಸದ್ದಿಲ್ಲದೆ ಮುಚ್ಚಿ ಹೋಗುತ್ತಿವೆ ಎನ್ನುವ ಆರೋಪ ಕೇಳಿ ಬಂದಿದ್ದು ಕೆಲವು ಪ್ರಕರಣಗಳಲ್ಲಿ ಒಳಗಿಂದೊಳಗೆ ಹಣ ವಸೂಲಿ ಮಾಡುವ ಘಟನೆಗಳು ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಜಿಲ್ಲೆಯ ಹೆಸರಾಂತ ಉದ್ಯಮಿಯ ದುರಂತ ಅಂತ್ಯ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್ ಮಾಡುವ ತಂಡಗಳನ್ನು ಬುಡ ಸಮೇತ ಮಟ್ಟ ಹಾಕಬೇಕೆನ್ನುವ ಆಗ್ರಹ ಕೇಳಿ ಬಂದಿದೆ. ಈಗಾಗಲೇ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಕೂಲಂಕುಶ ತನಿಖೆ ಮಾಡುವ ಬಗ್ಗೆ ಭರವಸೆ ನೀಡಿದ್ದು ಘಟನೆಗೆ ಸಂಬಂಧಿಸಿ ಕೈವಾಡ ಇರುವ ಆರೋಪಿಗಳ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

Leave a Reply

Your email address will not be published. Required fields are marked *

error: Content is protected !!