ಕರಾವಳಿ

ಪುತ್ತೂರು ಶಾಸಕರ ಭೇಟಿಗೆ ಎಲ್ಲೆಲ್ಲಿಂದ ಜನ ಬರ‍್ತಾರೆ ಗೊತ್ತಾ.



ಪುತ್ತೂರು: ವಾರದ ಪ್ರತೀ ಸೋಮವಾರ ಪುತ್ತೂರು ಶಾಸಕರಾದ ಅಶೋಕ್ ರೈ ಕಚೇರಿ ಜನರಿಂದ ಕಿಕ್ಕಿರಿದು ತುಂಬಿರುತ್ತದೆ, ಬೆಳಿಗ್ಗೆ 9 ಗಂಟೆಯ ವೇಳೆ ಸಾರ್ವಜನಿಕರು ಕಚೇರಿಯಲ್ಲಿ ಸಾಲು ಸಾಲಾಗಿ ನಿಂತಿರುತ್ತಾರೆ. ಹೀಗೇ ಬಂದವರ ಪೈಕಿ ಬಹುತೇಕರು ನೊಂದವರು, ಬಡವರು ಮತ್ತು ಯಾವುದೋ ಕಾರಣಕ್ಕೆ ಬಳಲಿ ಬೆಂಡಾದವರು. ತಮ್ಮ ಕಚೇರಿಗೆ ಬಂದ ಪ್ರತೀಯೊಬ್ಬರನ್ನೂ ಶಾಸಕರು ಮಾತನಾಡಿಸಿಯೇ ಕಳುಹಿಸುತ್ತಾರೆ. ಮಾತ್ರವಲ್ಲದೆ ಸ್ಥಳದಲ್ಲೇ ಪರಿಹಾರವನ್ನು ಒದಗಿಸುತ್ತಾರೆ, ಶಾಸಕರ ಪತ್ರ ಅಗತ್ಯವಾದಲ್ಲಿ ಪತ್ರವನ್ನೂ ನೀಡುತ್ತಾರೆ. ಹೀಗೇ ಸಂಕಷ್ಟದ ಸರಮಾಲೆಯನ್ನು ಹೊತ್ತುಕೊಂಡು ಬರುವವರು ಪುತ್ತೂರು ವಿಧಾನಸಭಾ ಕ್ಷೇತ್ರದ ಜನ ಮಾತ್ರವೇ ಎಂದು ನೀವು ತಿಳಿದುಕೊಂಡರೆ ಅದು ತಪ್ಪಾಗುತ್ತದೆ. ಶಾಸಕರ ಕಚೇರಿಗೆ ಎಲ್ಲೆಲ್ಲಿಂದ ಜನ ಬರುತ್ತಾರೆ ಎಂದು ನೀವು ತಿಳಿದುಕೊಳ್ಳಬೇಕಾದರೆ ಒಂದು ಸೋಮವಾರ ನೀವು ಕಚೇರಿಗೆ ಬಂದು ಕೇಳಿನೋಡಬಹುದು.

ಪುತ್ತೂರು ಮಾತ್ರವಲ್ಲದೆ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಿಂದಲೂ ಸಾರ್ವಜನಿಕರು ಶಾಸಕರ ಕಚೇರಿಗೆ ಭೇಟಿ ನೀಡುತ್ತಾರೆ, ಶಾಸಕರಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದು ಮಾತ್ರವಲ್ಲ ಪರಿಹಾರವನ್ನು ಕಂಡು ತೆರಳುತ್ತಾರೆ. ವಾರದಲ್ಲಿ ಒಂದು ದಿನ ಶಾಸಕ ಅಶೋಕ್ ರೈ ಅವರು ಸಾರ್ವಜನಿಕರೆಂದೇ ಮೀಸಲಿಟ್ಟು ಬೆಳಿಗ್ಗೆಯಿಂದ ರಾತ್ರಿ ತನಕ ಕಚೇರಿಯಲ್ಲಿ ಇರುತ್ತಾರೆ. ಪ್ರತೀ ಸೋಮವಾರ ಶಾಸಕರು ಕಚೇರಿಯಲ್ಲಿರುವ ಬಗ್ಗೆ ಸಾಧಾರಣ ಎಲ್ಲರಿಗೂ ಮಾಹಿತಿ ಇದೆ ಈ ಕಾರಣಕ್ಕೆ ಪ್ರತೀ ಸೋಮವಾರ ಸುಮಾರು 600 ರಿಂದ 700 ಮಂದಿ ಸಾರ್ವಜನಿಕರು ಶಾಸಕರನ್ನು ಭೇಟಿಯಾಗುತ್ತಾರೆ.

ಶಾಸಕರನ್ನು ಭೇಟಿಯಾಗುವ ಮಂದಿಯಲ್ಲಿ ಬಹುತೇಕರದ್ದು 94ಸಿ, 94 ಸಿಸಿ, ಅಕ್ರಮ ಸಕ್ರಮ ಸೇರಿದಂತೆ ಕಂಧಾಯ ಇಲಾಖೆಯ ಸಮಸ್ಯೆಗಳು, ಸಂಕಷ್ಟದಲ್ಲಿರುವ ಬಡವರು, ವಿದ್ಯಾಬ್ಯಾಸದ ನೆರವಿಗೆ, ಅನರೋಗ್ಯ ಪೀಡಿತರು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವವರು, ಮನೆ ಇಲ್ಲದವರು, ನಿವೇಶನ ಇಲ್ಲದವರು, ಹೀಗೇ ನಾನಾ ತರದ ಸಮಸ್ಯೆಯಿದ್ದವರೇ ಹೆಚ್ಚಾಗಿ ಕಚೇರಿಗೆ ಬಂದು ಶಾಸಕರಲ್ಲಿ ತಮ್ಮ ನೋವನ್ನು, ಸಂಕಷ್ಟವನ್ನು ಹೇಳಿಕೊಳ್ಳುತ್ತಾರೆ. ಕಚೇರಿ ಬರುವ ಜನರ ಪೈಕಿ ಶೇ. 90 ಕ್ಕೆ ಶಾಸಕರು ಸ್ಥಳದಲ್ಲೇ ಪರಿಹಾರವನ್ನು ನೀಡುತ್ತಾರೆ ಎಂಬುದು ವಿಶೇಷ.

ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆಂದು ವಾರದ ಪ್ರತೀ ಸೋಮವಾರ ಮೀಸಲಿಟ್ಟಿದ್ದೇನೆ, ಜನ ಬರುತ್ತಾರೆ, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ, ಪುತ್ತೂರು ಮಾತ್ರವಲ್ಲದೆ ಹೊರಗಿನಿಂದಲೂ ಜನ ಬಂದು ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಹೆಚ್ಚಾಗಿ ಬಡವರು ಕಚೇರಿಗೆ ಬಂದು ತಮ್ಮ ಸಂಕಷ್ಟವನ್ನು ಹೇಳುತ್ತಾರೆ. ಬಂದ ಪ್ರತೀಯೊಬ್ಬರನ್ನೂ ನಾನು ಮಾತನಾಡಿಸಿಯೇ ಕಳುಹಿಸುತ್ತೇನೆ. ಸರಕಾರ ಅಥವಾ ಇಲಾಖಾ ಮಟ್ಟದಲ್ಲಿ ಪರಿಹರಿಸುವ ಸಮಸ್ಯೆಯಾಗಿದ್ದಲ್ಲಿ ಅದನ್ನು ಅಧಿಕಾರಿಗಳ ಮೂಲಕ ಚರ್ಚಿಸಿ ಇತ್ಯರ್ಥಪಡಿಸುವ ಕೆಲಸವನ್ನು ಮಾಡುತ್ತೇನೆ. ಕೆಲವೊಂದು ಸಂದರ್ಭದಲ್ಲಿ ಸರಕಾರದಿಂದ ಏನೂ ಪರಿಹಾರ ಸಿಗದೇ ಇರುವ ವಿಚಾರವಾದರೆ ಅಂಥವರಿಗೆ ನನ್ನ ಸ್ವಂತ ನೆಲೆಯಲ್ಲಿ ಚಿಕ್ಕ ಸಹಾಯವನ್ನು ಮಾಡುತ್ತೇನೆ. ಯಾವುದೇ ಊರಿನಿಂದ ಜನ ಬಂದರೂ ನಾನು ಅವರನ್ನು ಸ್ವಾಗತಿಸುತ್ತೇನೆ ನನ್ನಿಂದಾಗುವ ಸಹಾಯವನ್ನು ಮಾಡಿಯೇ ಮಾಡುತ್ತೇನೆ ಎನ್ನುತ್ತಾರೆ ಶಾಸಕ ಅಶೋಕ್ ರೈ.

ಪುತ್ತೂರು ಶಾಸಕರಾದ ಅಶೋಕ್ ರೈ ಕಾರ್ಯವೈಖರಿಯನ್ನು ಪುತ್ತೂರಿನ ಜನತೆ ಮಾತ್ರವಲ್ಲ , ಕರ್ನಾಟಕದ ಜನ ಮೆಚ್ಚಿಕೊಂಡಿದ್ದಾರೆ. ಒಬ್ಬ ಸಚಿವರ ಕಚೇರಿಯಲ್ಲೂ ಇಷ್ಟೊಂದು ಜನ ಕಾಣಲು ಸಾಧ್ಯವಿಲ್ಲ. ಬಡವರ, ಕಾರ್ಮಿಕರ, ನೊಂದವರ ಪರವಾಗಿ ವಿಧಾನಸಭೆಯಲ್ಲಿ ದ್ವನಿ ಎತ್ತುವ ಮೂಲಕ ಅಶೋಕ್ ರೈ ಅವರು ಬಡವರ ಪರ ಎಂಬ ಮತು ಜಗಜ್ಜಾಹೀರಾಗಿದೆ. ಪ್ರತೀ ಸೋಮವಾರ ಶಾಸಕರ ಕಚೇರಿಯಲ್ಲಿ ಸಿಕ್ಕಾಪಟ್ಟೆ ಸಾರ್ವಜನಿಕರು ಸೇರುತ್ತಿರುವುದೇ ಇದಕ್ಕೆ ಸಾಕ್ಷಿ. ಅಶೋಕ್ ರೈ ಬಳಿ ಸಮಸ್ಯೆ ಹೇಳಿಕೊಂಡರೆ ಅದಕ್ಕೊಂದು ಪರಿಹಾರ ಸಿಕ್ಕೇ ಸಿಗುತ್ತದೆ ಎಂಬ ಭಾವನೆ ಪ್ರತೀಯೊಬ್ಬರಲ್ಲೂ ಇದೆ. ಇದು ಪುತ್ತೂರಿನ ಜನತೆ ಹೆಮ್ಮೆಯ ವಿಚಾರವಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!