ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಮೃತ್ಯು: ಕ್ಲಿನಿಕ್‌ಗೆ ಬೀಗ ಜಡಿದ ಆರೋಗ್ಯ ಇಲಾಖೆ
ಮಂಗಳೂರು: ಕಾಸ್ಮೆಟಿಕ್ ಸರ್ಜರಿಗೆ ತೆರಳಿದ್ದ ಯುವಕ ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ (32.ವ) ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕಂಕನಾಡಿಯ ಬೆಂದೂರ್‌ವೆಲ್‌ನ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್‌ಪ್ಲೆಂಟ್ ಕ್ಲಿನಿಕ್‌ನ್ನು ಆರೋಗ್ಯ ಇಲಾಖೆ ತಾತ್ಕಾಲಿಕವಾಗಿ ಬಂದ್ ಮಾಡಿದೆ ಎಂದು ತಿಳಿದು ಬಂದಿದೆ.
ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನದಂತೆ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಅವರು ಫ್ಲೋಂಟ್ ಅನ್ನು ಬಂದ್ ಮಾಡಿಸಿದ್ದಾರೆ.
ಮಾಝಿನ್ ತನ್ನ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಶನಿವಾರ ನಗರದ ಕಂಕನಾಡಿಯ ಬೆಂದೂರ್ ವೆಲ್ ನಲ್ಲಿರುವ “ಫ್ಲೋಂಟ್” ಕ್ಲಿನಿಕ್ ಗೆ ತೆರಳಿದ್ದರು. ಮಾಝಿನ್ ರೊಂದಿಗೆ ಅವರ ತಾಯಿ ಮತ್ತು ಪತ್ನಿ ಕೂಡಾ ಇದ್ದು, ಹೊರಗೆ ಕಾಯುತ್ತಿದ್ದರು. ಅರ್ಧ ಗಂಟೆಯಲ್ಲಿ ಮುಗಿಯಬಹುದಾಗಿದ್ದ ಈ ಸಣ್ಣ ಶಸ್ತ್ರ ಚಿಕಿತ್ಸೆಯು ಸಂಜೆಯಾದರೂ ಮುಗಿಯಲಿಲ್ಲ ಎನ್ನಲಾಗಿದೆ.
ಇದರಿಂದ ಸಂಶಯಗೊಂಡ ಮಾಝಿನ್ ರ ತಾಯಿ ಮತ್ತು ಪತ್ನಿ ವಿಚಾರಿಸಿದಾಗ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದೆ ಎಂಬ ಉತ್ತರ ಲಭಿಸಿದೆ. ತಕ್ಷಣ ಅಲ್ಲಿಂದ ಕೋಡಿಯಾಲ್ ಬೈಲ್ ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಮಾಝಿನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮಾಝಿನ್ ಸಾವಿಗೆ ಫ್ಲೋಂಟ್ ಕ್ಲಿನಿಕ್ ನ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದ್ದು ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿಕೊಂಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.