ಗೃಹಲಕ್ಷ್ಮೀ ಯೋಜನೆಗೆ ಒಂದು ವರ್ಷ
ಬೆಂಗಳೂರು: ಈಗಾಗಲೇ ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತೀ ತಿಂಗಳು ರೂ. 2000 ಪಡೆಯುತ್ತಿರುವ ಮನೆಯ ಯಜಮಾನಿಯರಿಗೆ ಮತ್ತೊಂದು ಆಫರ್ ಬಂದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ, ಪ್ರತಿ ಮನೆಯ ಯಜಮಾನಿ ಖಾತೆಗೆ ತಿಂಗಳಿಗೆ 2000 ರೂ. ವರ್ಗಾವಣೆ ಮಾಡುವ ‘ಗೃಹಲಕ್ಷ್ಮಿ’ ಯೋಜನೆ ಒಂದು ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮಹಿಳೆಯರಿಗೆ ಆಫರ್ ಒಂದನ್ನು ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಬಗ್ಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂದು ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಮಹಿಳೆಯರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಕೋಟ್ಯಂತರ ಮನೆಯೊಡತಿಯರ ಕುಟುಂಬ ನಿರ್ವಹಣೆಯ ಜವಾಬ್ದಾರಿಯೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ‘ಗೃಹಲಕ್ಷ್ಮಿ’ ಯೋಜನೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಸಂಭ್ರಮದಲ್ಲಿದೆ. ಮನೆಯೊಡತಿಯರಿಗೆ, ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯಿಂದ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ತಿಳಿದುಕೊಳ್ಳಲು ಕಾತುರಳಾಗಿದ್ದೇನೆ. ನಿಮ್ಮ ಜೀವನದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದಾದ ಬದಲಾವಣೆಯ ಕುರಿತು ಒಂದು ತಿಂಗಳ ಅವಧಿಯವರೆಗೆ (ಸೆಪ್ಟೆಂಬರ್ 30) ರೀಲ್ಸ್ ಮೂಲಕ ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ, ಯಾವ ರೀಲ್ಸ್ ಗಳು ಹೆಚ್ಚಿನ ವೀಕ್ಷಣೆಗಳನ್ನು (Views) ಪಡೆದುಕೊಳ್ಳುತ್ತವೆಯೋ ಅಂತಾ ರೀಲ್ಸ್ ಗಳಿಗೆ ವೈಯಕ್ತಿಕವಾಗಿ ಬಹುಮಾನ ವಿತರಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.