ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್
ಬೆಂಗಳೂರು:ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿದ ಆರೋಪ ಎದುರಿಸುತ್ತಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಡಿಕೆಶಿ ವಿರುದ್ಧ ಸಿಬಿಐ, ಹಾಗೂ ಶಾಸಕ ಯತ್ನಾಳ್ ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ಡಿಕೆ ಶಿವಕುಮಾರ್ ವಿರುದ್ದ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದಲ್ಲಿ ಪ್ರಕರಣದ ತನಿಖೆಗೆ ಎಂದು ಸಿಬಿಐಗೆ ನೀಡಲಾಗಿದ್ದ ಅನುಮತಿಯನ್ನು ವಾಪಸ್ ಪಡೆದಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅರ್ಜಿ ಸಲ್ಲಿಸಿದ್ದರು.
ಬಸವನಗೌಡ ಪಾಟೀಲ್ ಯತ್ನಾಳ್ 2023ರ ಡಿಸೆಂಬರ್ ಹಾಗೂ 2024ರ ಜನವರಿಯಲ್ಲಿ ಸಿಬಿಐ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾ| ಕೆ. ಸೋಮ ಶೇಖರ್ ನೇತೃತ್ವದ ವಿಭಾಗೀಯ ಪೀಠ ಆಗಸ್ಟ್ 12ರಂದು ತೀರ್ಪು ಕಾದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ಪೀಠ, ಇದು ವಿಚಾರಣೆಗೆ ಅರ್ಹವಲ್ಲ ಎಂದಿತು. ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸಲಿ. ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದರೆ ಸೂಕ್ತ ಎಂದು ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.