ಕಾರ್ಕಳ ಅತ್ಯಾಚಾರ ಪ್ರಕರಣ: ಯುವತಿಯ ರಕ್ತದಲ್ಲಿ ಮಾದಕ ವಸ್ತುವಿನ ಅಂಶ ಪತ್ತೆ: ಎಸ್ಪಿ
ಕಾರ್ಕಳದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ರಕ್ತಪರೀಕ್ಷೆ ವರದಿ ಬಂದಿದ್ದು ರಕ್ತದಲ್ಲಿ ಮಾದಕ ವಸ್ತುವಿನ ಅಂಶ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ.ಅರುಣ್ ತಿಳಿಸಿದ್ದಾರೆ.
ಅಲ್ತಾಫ್ ಹಾಗೂ ಮತ್ತೋರ್ವ ಆರೋಪಿಯ ರಕ್ತ ಪರೀಕ್ಷೆಯಲ್ಲಿ ಮಾದಕ ಅಂಶ ಪತ್ತೆಯಾಗಿಲ್ಲ ಎನ್ನಲಾಗಿದೆ. ಯುವತಿ ರಕ್ತದಲ್ಲಿ ಪಾಸಿಟಿವ್ ಬಂದಿರುವ ಬಗ್ಗೆ ಅಲ್ತಾಫ್ ನನ್ನು ವಿಚಾರಿಸಿದಾಗ, ಅವನು ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ, ಇದನ್ನೇ ಆ ಯುವತಿ ತೆಗೆದುಕೊಂಡಿದ್ದು ಎಂದು ಹೇಳಿದ್ದು ಆ ಪುಡಿಯನ್ನು ಎಫ್ಎಸ್‌ಎಲ್ ಗೆ ಕಳುಹಿಸಿದ್ದು, ಅದು ಯಾವ ಡ್ರಗ್ಸ್ ಎಂದು ಕಂಡುಹಿಡಿಯಲಾಗುವುದು. ಸಂತ್ರಸ್ತೆಯ ರಕ್ತದಲ್ಲಿ ಪತ್ತೆಯಾಗಿರುವುದು ಇದರದ್ದೇ ಅಂಶವೇ ಎಂಬ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಡ್ರಗ್ ಅನ್ನು ಎಲ್ಲಿಂದ ಪಡೆದಿದ್ದಾರೆ ಮತ್ತು ಎಲ್ಲಿಂದ ಬಂದಿದೆ ಎನ್ನುವುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸಂತ್ರಸ್ತೆಯು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಬಾಕಿ ಇದ್ದು, ಅವರು ಚೇತರಿಸಿಕೊಂಡ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಆದಷ್ಟು ಬೇಗನೆ ಈ ಪ್ರಕರಣದ ತನಿಖೆಯನ್ನು ಮುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ.ಅರುಣ್ ತಿಳಿಸಿದ್ದಾರೆ.