ಅರುಣ್ ಪುತ್ತಿಲ ಅವರದ್ದು ಎನ್ನಲಾದ ಆಡಿಯೋ ಜಾಲತಾಣದಲ್ಲಿ ವೈರಲ್
ಪುತ್ತೂರು: ಪುತ್ತಿಲ ಪರಿವಾರದ ಮುಖಂಡ ಅರುಣ್ ಪುತ್ತಿಲ ಅವರದ್ದು ಎನ್ನಲಾದ ಆಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪುತ್ತೂರು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಓರ್ವ ಮಹಿಳೆಯ ಜೊತೆ ಫೋನ್ ಸಂಭಾಷಣೆಯ ಆಡಿಯೋ ಇದಾಗಿದ್ದು, ಇದರಲ್ಲಿ ಇಬ್ಬರು ಸಾಕಷ್ಟು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಮಾತುಕತೆಯ ಆರಂಭದಲ್ಲೇ ಮಹಿಳೆಯು ಆಯ್ತಲ್ಲಾ ನಿಮ್ಮ ಕಥೆ, ಪುತ್ತಿಲ ಅಧ್ಯಾಯ ಇನ್ನು ಮುಗಿಯಿತು ಎಂದು ಹೇಳಿದ್ದು ಅದಕ್ಕೆ ಪುತ್ತಿಲ ಅವರು ನಗುತ್ತಾ ಇತಿಹಾಸ ಪುಟ ಸೇರಿ ಆಯಿತಾ ಎಂದು ಹೇಳಿದ್ದಾರೆ.
ನೀವಿನ್ನು ಪಕ್ಷದಲ್ಲಿ ಕೇವಲ ಬ್ಯಾನರ್ ಕಟ್ಟಲು ಮಾತ್ರ ಸೀಮಿತ ಅಂತ ಪುತ್ತಿಲರಿಗೆ ಮಹಿಳೆ ಹೇಳಿದ್ದಾರೆ. ‘ನಿಮ್ಮ ಭವಿಷ್ಯ ಇಲ್ಲಿಗೆ ಮುಗಿಯಿತು… ಇನ್ಮುಂದೆ ಪಕ್ಷದ ಬ್ಯಾನರ್ ಕಟ್ಟಿಕೊಂಡು ಇರಬೇಕಷ್ಟೆ. ಇನ್ಮುಂದೆ ನಿಮಗೆ ಬಿಜೆಪಿಯಲ್ಲಿ ಭವಿಷ್ಯವಿಲ್ಲ. ನಿಮ್ಮ ಭವಿಷ್ಯ ನೀವೇ ಹಾಳು ಮಾಡಿಕೊಂಡಿದ್ದೀರಿ’ ಎಂದೆಲ್ಲಾ ಮಹಿಳೆ ಹೇಳಿದ್ದಾರೆ. ‘ರಾಜಕೀಯ ಅಂದ್ರೆ ನಾಚಿಕೆ ಅದೆಲ್ಲ ಯಾವುದೂ ಇಲ್ಲ, ಮಾನ ಮರ್ಯಾದೆ ಬಿಟ್ಟವರೇ ಉನ್ನತ ಹುದ್ದೆಗೆ ಹೋಗಲು ಸಾಧ್ಯವಾಗಿದೆ ಎಂದು ಪುತ್ತಿಲ ಹೇಳಿದ್ದು ಆಡಿಯೋದಲ್ಲಿದೆ.
ನಿಮ್ಮ ಮೇಲೆ ಎಲಿಗೇಶನ್ ಇದೆ, ಕಳೆದ 35 ವರ್ಷಗಳಿಂದ ಪಕ್ಷ ದ್ರೋಹ ಮಾಡಿದ್ದೀರಿ ಎಂದು ಮಹಿಳೆ ಹೇಳಿದ್ದು ಆಗ ಪುತ್ತಿಲ ಅವರು ನಾನು ಮೂರುವರೆ ಕೋಟಿ ರೂ. ಪಡೆದಿರುವುದಾಗಿ ನಮ್ಮವರೇ ಹೇಳಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ. ಹತ್ತು ಹಲವು ವಿಚಾರಗಳನ್ನು ಒಳಗೊಂಡ ಮಾತುಕತೆ ಆಡಿಯೋದಲ್ಲಿ ಕೇಳಿ ಬಂದಿದೆ.
ಪುತ್ತೂರಿನ ರಾಜಕೀಯ ವಿಚಾರ ಹಾಗೂ ಚುನಾವಣೆಯಲ್ಲಿ ಬಿಜೆಪಿ ಸೋಲಿನ ವಿಚಾರಗಳು ಇಲ್ಲಿ ಚರ್ಚೆ ಆಗಿದೆ. ಅಷ್ಟೇ ಅಲ್ಲದೆ ಪುತ್ತಿಲ ಅವರಿಗೆ ಬಿಜೆಪಿಯಲ್ಲಿ ಸ್ಥಾನಮಾನ ಸಿಗದೆ ಮೂಲೆಗುಂಪಾಗಿರುವ ವಿಚಾರ ಕೂಡಾ ಚರ್ಚೆ ಆಗಿದೆ. ಮಹಿಳೆ ನಗು ನಗುತ್ತಾ ಮಾತನಾಡುವುದು ಆಡಿಯೋದಲ್ಲಿದೆ. ಒಟ್ಟಾರೆಯಾಗಿ ಪುತ್ತಿಲರದ್ದು ಎನ್ನಲಾದ ಆಡಿಯೋ ಸದ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಇದೀಗ ಪುತ್ತಿಲ ಅವರದ್ದು ಎನ್ನಲಾದ ಸಂಭಾಷಣೆಯ ಎರಡನೇ ಆಡಿಯೋ ಕೂಡಾ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಅರುಣ್ ಪುತ್ತಿಲ ಅವರನ್ನು ರಾಜಕೀಯವಾಗಿ ಮುಗಿಸಲು ವಿರೋಧಿಗಳು ವ್ಯವಸ್ಥಿತವಾಗಿ ಸಂಚು ರೂಪಿಸಿ ಇಂತಹ ಷಡ್ಯಂತ್ರ ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ಕೂಡಾ ವ್ಯಕ್ತವಾಗಿದೆ. ಪುತ್ತಿಲ ಜೊತೆಗಿರುವವರೇ ಆಡಿಯೋ ವೈರಲ್ ಮಾಡಿದ್ದಾರೆಯೇ ಎನ್ನುವ ಬಗ್ಗೆಯೂ ಜಾಲ ತಾಣದಲ್ಲಿ ಚರ್ಚೆಯಾಗುತ್ತಿದೆ.