ಕರಾಯ: ಬಾಲಕಿ ಆತ್ಮಹತ್ಯೆ
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಜಾಖಂಡ್ ಮೂಲದ ಕುಟುಂಬವೊಂದರ 14 ರ ಹರೆಯದ ಬಾಲಕಿ ನೀಲಮ್ ಕುಮಾರ್ ಎಂಬಾಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಆದಿತ್ಯವಾರ ರಾತ್ರಿ ಸಂಭವಿಸಿದೆ.
ಮೂಲತಃ ಜಾಖಂಡ್ ರಾಜ್ಯದ ಲಾತೆಹಾರ್ ಜಿಲ್ಲೆಯ ಜಲ್ತಾ ಪರ್ಸಾರಿ ಲೆಡ್ಪಾ ನಿವಾಸಿಯಾಗಿರುವ ಸರ್ಜು ಬುಯ್ಯಾನ್ ತನ್ನ ಪತ್ನಿ ಮಗಳೊಂದಿಗೆ ವಾರದ ಹಿಂದೆ ಕರಾಯ ಗ್ರಾಮದ ಒರ್ವರ ತೋಟದ ಕೆಲಸಕ್ಕೆ ಆಗಮಿಸಿದ್ದರು. ಬಾಲಕಿಯು ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿರುತ್ತಾಳೆ ಎಂದು ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಾಲಕಿ ಮೊಬೈಲ್ ಬಳಕೆ ಮಾಡಿದ್ದ ವಿಚಾರದಲ್ಲಿ ಆಕೆಯ ತಾಯಿ ಬೈದದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.