ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರ ರಾಜೀನಾಮೆ ಹೈಡ್ರಾಮಾ..! ಕೈ ನಾಯಕರ ತುರ್ತು ಮಧ್ಯ ಪ್ರವೇಶ
ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಗ್ರಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆಯವರ ಮನವೊಲಿಸುವಲ್ಲಿ ಸುಳ್ಯದ ಹಿರಿಯ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ.
ನಾಯಕರ ಒತ್ತಾಯಕ್ಕೆ ಮಣಿದಿರುವ ಸೋಮಶೇಖರ್‌ರವರು ರಾಜೀನಾಮೆ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಗ್ರಾ.ಪಂನಲ್ಲಿ ತಮ್ಮದೇ ಪಕ್ಷದ ಬೆಂಬಲಿತ ಸದಸ್ಯರೋರ್ವರ ಜೊತೆಗಿದ್ದ ಭಿನ್ನಮತವೇ ಸೋಮಶೇಖರ್ ಮತ್ತು ಇತರ ಮೂವರು ಸದಸ್ಯರ ರಾಜೀನಾಮೆಗೆ ಕಾರಣ ಎನ್ನಲಾಗಿತ್ತು.
ಸೋಮಶೇಖರ್ ರಾಜೀನಾಮೆ ಬಳಿಕ ಅವರ ಬೆಂಬಲಕ್ಕೆ ನಿಂತ ಇನ್ನೂ ಮೂವರು ಸದಸ್ಯರು ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ತನ್ನ ನಿಲುವನ್ನು ವಿವರಿಸುವುದಕ್ಕಾಗಿ ಸೋಮಶೇಖರ್‌ರವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು.
ಪರಿಸ್ಥಿತಿ ಕೈ ಮೀರುವುದನ್ನು ಕಂಡ ಕಾಂಗ್ರೆಸ್ ಮುಖಂಡರು ನ.26ರಂದು ಧನಂಜಯ ಅಡ್ಪಂಗಾಯರ ಮನೆಯಲ್ಲಿ ಕೋರ್ ಕಮಿಟಿಯ ತುರ್ತು ಸಭೆ ನಡೆಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ರಾಜ್ಯ ವಕ್ತಾರ ಭರತ್ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಪ್ರ. ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಮೊದಲಾದವರಿದ್ದ ಈ ಸಭೆಗೆ ಸೋಮಶೇಖರ್ ಕೊಯಿಂಗಾಜೆ ಮತ್ತಿತರರನ್ನು ಕರೆದು ಚರ್ಚಿಸಿ ರಾಜೀನಾಮೆ ಹಿಂತೆಗೆದುಕೊಳ್ಳುವಂತೆಯೂ, ಪಕ್ಷ ವಿರೋಧಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸುವುದಾಗಿಯೂ ಹೇಳಿದ್ದರೆನ್ನಲಾಗಿದೆ.
ಈ ಒತ್ತಾಯ ಮತ್ತು ಭರವಸೆಗೆ ಮಣಿದ ಸೋಮಶೇಖರ್ ಕೊಯಿಂಗಾಜೆ ಮತ್ತು ಇತರ ಮೂವರು ಪಂಚಾಯತ್ ಸದಸ್ಯರು ತನ್ನ ರಾಜೀನಾಮೆ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಪಾಜೆ ಗ್ರಾ.ಪಂ.ನಲ್ಲಿ 14 ಮಂದಿ ಸದಸ್ಯರಿದ್ದು, ಅವರಲ್ಲಿ ಒಬ್ಬರು ಬಿಜೆಪಿ ಬೆಂಬಲಿತರು. 13 ಮಂದಿ ಕಾಂಗ್ರೆಸ್ ಬೆಂಬಲಿತರು.