ಬಾಂಗ್ಲಾ ಪ್ರಧಾನಿಯ ಬಂಗಲೆಗೆ ನುಗ್ಗಿದ ಸಾವಿರಾರು ಪ್ರತಿಭಟನಾಕಾರರು
ಬಾಂಗ್ಲಾದೇಶದಲ್ಲಿ ಕ್ಷಿಪ್ರ ಕ್ರಾಂತಿ ಉಂಟಾಗಿ ದೇಶದ ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅಲ್ಲಿನ ಜನರು ಸಂಭ್ರಮಾಚರಣೆ ಮಾಡಿದ್ದಾರೆ. ಲಕ್ಷಾಂತರ ಜನರು ಪ್ರಧಾನಿಯವರ ಅಧಿಕೃತ ಸರ್ಕಾರಿ ಬಂಗಲೆಗೆ ನುಗ್ಗಿ, ಅಲ್ಲಿರುವ ಪೀಠೋಪಕರಣ, ಅಡುಗೆಮನೆಯ ವಸ್ತುಗಳು, ಶೇಖ್ ಹಸೀನಾ ಅವರ ಸೀರೆ, ಒಡವೆಗಳು ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.
ಶೇಖ್ ಹಸೀನಾ ಅವರ ಅಡುಗೆ ಮನೆಯಲ್ಲಿದ್ದ ಸಿಹಿ ತಿಂಡಿಗಳನ್ನು ತಿನ್ನುತ್ತಾ ಹಲವಾರು ಮಂದಿ ರೀಲ್ಸ್ ಕೂಡಾ ಮಾಡಿದರೆ ಮತ್ತೆ ಹಲವಾರು ಮಂದಿ ಪ್ರಧಾನಿ ಶೇಖ್ ಹಸೀನಾ ಅವರ ಬೆಡ್ರೂಂನಲ್ಲಿ ಮಲಗಿ, ಕುಣಿದು ಕುಪ್ಪಳಿಸಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ಸೋಫಾ, ಹಸಿ ಮೀನು, ಕೋಳಿ, ಬಾತುಕೋಳಿ, ಚಯರ್, ಫ್ಯಾನ್ ಎಲ್ಲವನ್ನೂ ಎತ್ತಿಕೊಂಡು ಹೋಗಿದ್ದಾರೆ. ರಸ್ತೆಯುದ್ದಕ್ಕೂ ಮೆರವಣಿಗೆ ಮಾದರಿಯಲ್ಲಿ ವಸ್ತುಗಳನ್ನು ಹೊತ್ತುಕೊಂಡು ಹೋಗಿದ್ದು ಇದನ್ನು ಹಲವರು ವೀಡಿಯೋ ಮಾಡಿಕೊಂಡಿದ್ದಾರೆ.
ಬಳಿಕ ಅಡುಗೆ ಮನೆಗೆ ನುಗ್ಗಿ ಅಲ್ಲಿನ ಫ್ರಿಜ್‌ಗಳಲ್ಲಿದ್ದ ವಸ್ತುಗಳನ್ನು ಕದ್ದಿದ್ದು ಮಾತ್ರವಲ್ಲದೆ, ಪಾತ್ರೆಗಳಲ್ಲಿದ್ದ ಆಹಾರವನ್ನು ಬಾಚಿಕೊಂಡು ತಿಂದಿದ್ದಾರೆ. ಇನ್ನು ನಿವಾಸದ ಒಳಗಡೆ ಇದ್ದ ಶೇಖ್ ಹಸೀನಾ ಅವರ ಚಿತ್ರಕ್ಕೂ ಪ್ರತಿಭಟನಾಕಾರರು ಹಾನಿ ಮಾಡಿದ್ದಾರೆ. ಅಲ್ಲದೆ, ಅವರಲ್ಲಿ ಹಲವರು ನಿವಾಸದಲ್ಲಿದ್ದ ಕೆರೆಯಲ್ಲಿ ಮೀನು ಹಿಡಿದ್ದಾರೆ, ಮೇಕೆಗಳು ಮತ್ತು ಬಾತುಕೋಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಮಾತ್ರವಲ್ಲದೆ ಶೇಖ್ ಹಸೀನಾ ದೇಶ ಬಿಟ್ಟು ಹೋಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದ ಕೂಡಲೇ ಸಂಭ್ರಮಾಚರಣೆ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಒಟ್ಟಾರೆಯಾಗಿ ಬೃಹತ್ ವಿಜಯೋತ್ಸವ ಅಲ್ಲಿ ನಡೆದಿತ್ತು ಎಂದು ವರದಿಯಾಗಿದೆ. ಆ ಸಂದರ್ಭದ ಕೆಲವು ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.