ಚೊಚ್ಚಲ ಭಾಷಣದಲ್ಲಿ ಮಹಿಳಾ ಆರೋಗ್ಯದ ಬಗ್ಗೆ ಪ್ರಸ್ತಾಪಿಸಿದ ಸುಧಾ ಮೂರ್ತಿಗೆ ಮೋದಿ ಮೆಚ್ಚುಗೆ
ನವದೆಹಲಿ: ರಾಜ್ಯಸಭೆಯ ನೂತನ ಸಂಸದೆ ಸುಧಾ ಮೂರ್ತಿ ಅವರ ಚೊಚ್ಚಲ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸುಧಾ ಮೂರ್ತಿ ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿದ್ದರು. ತಾಯಿ ಸತ್ತಾಗ ಅದನ್ನು ಆಸ್ಪತ್ರೆಯಲ್ಲಿ ಒಂದು ಸಾವು ಎಂದು ಮಾತ್ರ ಪರಿಗಣಿಸಲಾಗುತ್ತದೆ. ಆದರೆ ಕುಟುಂಬದವರು ತಾಯಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ. ಒಬ್ಬ ಗಂಡನಿಗೆ ಮತ್ತೊಬ್ಬಳು ಹೆಂಡತಿ ಬರಬಹುದು. ಆದರೆ, ಮಕ್ಕಳಿಗೆ ಮತ್ತೊಬ್ಬಳು ತಾಯಿ ಬರಲು ಸಾಧ್ಯವಿಲ್ಲ. ಹೀಗಾಗಿ, ತಾಯಂದಿರ ಆರೋಗ್ಯದ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸುಧಾ ಮೂರ್ತಿ ಹೇಳಿದ್ದರು.
ಮಹಿಳೆಯರ ಆರೋಗ್ಯದ ವಿಚಾರವಾಗಿ ಕಾಳಜಿ ವಹಿಸಿ ಮಾತನಾಡಿದ್ದಕ್ಕಾಗಿ ನಾನು ಸುಧಾ ಮೂರ್ತಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರವು ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯವನ್ನು “ಆದ್ಯತೆಯ ವಲಯ”ವಾಗಿ ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು.