ವಿಟ್ಲ: ಮೋತಿ ಸಿಟಿ ಕಟ್ಟಡದಲ್ಲಿ ಮೆಹಂದಿ ತರಗತಿ ಉದ್ಘಾಟನೆ
ವಿಟ್ಲ: ಮೆಹಂದಿಗೆ ಪ್ರಾಚೀನ ಕಾಲದ ಇತಿಹಾಸ ಇದ್ದು ಅದೊಂದು ಕೈಯಿಂದ ಕೈಯಲ್ಲಿ ಅರಳುವ ಅದ್ಬುತ ಕಲೆಯಾಗಿದೆ. ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಗೃಹಣಿಯರು ಮೆಹಂದಿ ಬಿಡಿಸುವುದು ಕಲಿಯುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವಾಗಬಹುದು ಎಂದು ವಿಟ್ಲದ ದಂತ ವೈದ್ಯೆ ಡಾ. ಕೌಲತ್ ಬಿ.ಎಂ. ಹೇಳಿದರು. ವಿಟ್ಲ ಸ್ಕೂಲ್ ರೋಡಿನ ಮೋತಿ ಸಿಟಿ ಕಟ್ಟಡದಲ್ಲಿ ಇತ್ತೀಚಿಗೆ ಆರಂಭಗೊಂಡ ದಿ ನ್ವಾಲೇಜ್ ಹಬ್ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಮೆಹಂದಿ ತರಗತಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಡಿಮೆ ಶುಲ್ಕದಲ್ಲಿ, ಸಣ್ಣ ಅವಧಿಯಲ್ಲಿ, ದಿನ ಒಂದೆರಡು ಗಂಟೆ ತರಬೇತಿ ಪಡೆಯುವ ಮೂಲಕ ಮೆಹಂದಿ ಬಿಡಿಸುವುದನ್ನು ಕರಗತ ಮಾಡಿಕೊಂಡರೆ ಭವಿಷ್ಯದಲ್ಲಿ ಉತ್ತಮ ಆದಾಯಗಳಿಸಬಹುದಾಗಿದೆ. ನಿರುದ್ಯೋಗಿ ಯುವತಿಯರಿಗೆ, ಗೃಹಣಿಯರಿಗೆ ಮೆಹಂದಿ ತರಗತಿ ಉತ್ತಮ ಆಯ್ಕೆಯಾಗಿದೆ ಎಂದು ಹೇಳಿದರು. ವಿಟ್ಲದ ಹೃದಯ ಭಾಗದಲ್ಲಿ, ಸಕಲ ಸೌಕರ್ಯಗಳು ಇರುವ ಸುಸಜ್ಜಿತವಾದ ಕಟ್ಟಡದಲ್ಲಿ, ಮಹಿಳಾ ಸ್ನೇಹಿ ಕ್ಲಾಸ್ ರೂಮ್ ನಿರ್ಮಿಸಿ ಮೆಹಂದಿ ತರಗತಿ ಆರಂಭಿಸಿರುವುದು ವಿಟ್ಲ ಪಟ್ಟಣದ ಹಾಗೂ ವಿಟ್ಲ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಲಭಿಸಿರುವ ಸುವರ್ಣವಕಾಶವಾಗಿದೆ. ಈ ಸುವರ್ಣ ಅವಕಾಶ ಈ ಭಾಗದ ಮಹಿಳೆ ಪಡೆದುಕೊಳ್ಳಬೇಕಾಗಿ ಅವರು ವಿನಂತಿಸಿದರು. ಮೆಹಂದಿ ಶಿಕ್ಷಕಿ ಶಬ್ನಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯನಿರ್ವಾಹಕ ಶಿಕ್ಷಕಿ ಮಾಸಿತಾ ಅಲಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.