ಲೋಕಸಭೆ: ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ
ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಹಲವು ಬಾರಿ ರಾಹುಲ್ ಗಾಂಧಿ ಅವರೇ ವಿಪಕ್ಷ ನಾಯಕನಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇಂಡಿಯಾ ಬ್ಲಾಕ್ ಸಭೆಯಲ್ಲಿ ಇತರೆ ಪಕ್ಷಗಳು ಕೂಡ ಇದಕ್ಕೆ ಬೆಂಬಲ ನೀಡಿದ್ದವು. ಆದರೆ, ಇಂದು ಈ ಕುರಿತು ಕಾಂಗ್ರೆಸ್ ಅಧಿಕೃತವಾಗಿ ಮಾಹಿತಿ ನೀಡಿದೆ.

ರಾಹುಲ್ ಗಾಂಧಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಸಂಚರಿಸಿ ಕಾಂಗ್ರೆಸ್ ಹಾಗೂ ಇಂಡಿಯಾ ಬ್ಲಾಕ್ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿ ಮತ್ತು ಕೇರಳದ ವಯನಾಡು ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡೂ ಕಡೆ ಭಾರೀ ಅಂತರದಿಂದ ಜಯ ಸಾಧಿಸಿದ್ದರು. ಆದರೆ, ಎರಡು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾದ್ದರಿಂದ ವಯನಾಡನ್ನು ಬಿಟ್ಟು ರಾಯ್ಬರೇಲಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಅವರಿಂದ ತೆರವಾಗಿರುವ ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ.