ಅಮಾಯಕ ಮುಸ್ಲಿಮರ ಬಂಧನ ಆರೋಪ: ಎಸ್.ಡಿ.ಪಿ.ಐ ನಿಂದ ಕೊಣಾಜೆ ಪೊಲೀಸ್ ಠಾಣೆಯ ಮುಂಭಾಗ ಬೃಹತ್ ಪ್ರತಿಭಟನೆ
ಮಂಗಳೂರು: ಬೋಳಿಯಾರ್‌ನಲ್ಲಿ ಚೂರಿ ಇರಿತ ಪ್ರಕರಣದಲ್ಲಿ ಅಮಾಯಕ ಮುಸ್ಲಿಮರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಎಸ್ ಡಿ ಪಿ ಐ ವತಿಯಿಂದ ಕೊಣಾಜೆ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಯಿತು.
ಎಸ್ ಡಿ ಪಿ ಐ ಮುಖಂಡರಾದ ಅನ್ವರ್ ಸಾದತ್ ಬಜತ್ತೂರು, ಅಥಾವುಲ್ಲಾ, ರಿಯಾಜ್ ಕಡಂಬು ಮೊದಲಾದವರು ಪ್ರತಿಭಟನೆಯಲ್ಲಿ ಮಾತನಾಡಿದರು. ಮುಸ್ಲಿಮರ ಮನೆಗಳಿಗೆ ನುಗ್ಗಿ ಅಮಾಯಕ ಮುಸ್ಲಿಮರನ್ನು ಬಂಧಿಸುವುದು ಮತ್ತು ದೌರ್ಜನ್ಯ ಮಾಡುವುದನ್ನು ಪೊಲೀಸರು ಈ ಕೂಡಲೇ ನಿಲ್ಲಿಸಬೇಕು, ಇಲ್ಲದಿದ್ದಲ್ಲಿ ಮಂಗಳೂರನ್ನು ಸ್ಥಬ್ಧವಾಗುವ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಲ್ಲಿ ಅಮಾಯಕರ ಬಂಧನ, ದೌರ್ಜನ್ಯವಾಗುತ್ತಿದ್ದರೆ ಕ್ಷೇತ್ರದ ಶಾಸಕ, ಸ್ಪೀಕರ್ ಯುಟಿ ಖಾದರ್ ದುಬೈಯಲ್ಲಿ ಜ್ವಾಲಿ ಮಾಡುತ್ತಿದ್ದಾರೆ. ನಿಮಗೆ ಒಂದಲ್ಲ ಒಂದು ದಿನ ಅಮಾಯಕರ ಕಣ್ಣೀರಿನ ಶಾಪ ತಟ್ಟದೇ ಇರದು ಎಂದು ಅನ್ವರ್ ಸಾದಾತ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕ್ಷೇತ್ರದ ಜನತೆಯ ಮತವನ್ನು ಪಡೆದ ಯುಟಿ ಖಾದರ್ ಅವರು ಕ್ಷೇತ್ರದ ಮುಸ್ಲಿಮರ ನೋವಿಗೆ ಯಾಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿ ರಿಯಾಜ್ ಕಡಂಬು ಅವರು ಅಧಿಕಾರ ಶಾಶ್ವತ ಅಲ್ಲ ಎಂಬುದು ನಿಮಗೆ ನೆನಪಿರಲಿ ಎಂದು ಹೇಳಿದರು. ಪೊಲೀಸರ ವಿರುದ್ಧ ಅವಾಚ್ಯವಾಗಿ ನಿಂದಿಸುವ ಹರೀಶ್ ಪೂಂಜಾರನ್ನು ಬಂಧಿಸಲು ತಾಕತ್ತು ಇಲ್ಲದ ಪೊಲೀಸ್ ಇಲಾಖೆ ಅಮಾಯಕ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಬಂಧಿಸುತ್ತಿರುವುದು ಯಾವ ನ್ಯಾಯ ಎಂದು ರಿಯಾಜ್ ಕಡಂಬು ಪ್ರಶ್ನಿಸಿದರು.
ಬೋಳಿಯಾರ್‌ನಲ್ಲಿ ಘಟನೆ ನಡೆದ ನಂತರ ಮುಸ್ಲಿಮರ ಮೇಲೆ ಪೊಲೀಸ್ ದೌರ್ಜನ್ಯ ನಡೆಯಲು ಆರಂಭಿಸಿದ್ದು ಅಂದಿನಿಂದ ಇವತ್ತಿನವರೆಗೂ ಎಸ್ ಡಿ ಪಿ ಐ ಬೋಳಿಯಾರ್‌ನ ಜನತೆಯೊಂದಿಗಿದೆ. ನಮಗೆ ಜನರ ನೋವು ಗೊತ್ತಿದೆ, ರಾಜ್ಯ ಸರಕಾರ ಸಂಘ ಪರಿವಾರವನ್ನು ಮೆಚ್ಚಿಸಲು ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದೆಯಾ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.