ಲಾಕಪ್ ಡೆತ್ ಕೇಸ್: ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ
ಬೆಂಗಳೂರು: ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ಆದಿಲ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಆದಿಲ್ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪೊಲೀಸರು ಆತನನ್ನು ಠಾಣೆಗೆ ಕರೆತಂದಿದ್ದರು. ಠಾಣೆಗೆ ಕರೆತಂದು 7 ನಿಮಿಷದೊಳಗೆ ಆರೋಗ್ಯದಲ್ಲಿ ಏರುಪೇರು ಆಗಿ ಆದಿಲ್ ಮೃತಪಟ್ಟಿದ್ದಾನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರಣೋತ್ತರ ಪರೀಕ್ಷೆಯಲ್ಲಿ ಎಲ್ಲ ವಿಚಾರ ಗೊತ್ತಾಗಲಿದೆ. “ಪೊಲೀಸರೇ ಹೊಡೆದು ಮೃತಪಟ್ಟಿದ್ದಾರೆ” ಎಂದು ತಿಳಿದುಕೊಂಡು ಪ್ರತಿಭಟನೆ ಮಾಡಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗುವ ಪ್ರಯತ್ನ ಕೂಡ ಮಾಡಿದ್ದಾರೆ. ಆದರೆ ಯುವಕ ಹೇಗೆ ಮೃತಪಟ್ಟಿದ್ದಾನೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ” ಎಂದು ಹೇಳಿದರು.