ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ
ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದ ಮಹಿಳೆ ಸಕ್ಕುಬಾಯಿ ಎನ್ನುವವರು ಧೀರ್ಘ ಕಾಲದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದ ಕಾರಣ ಚಿಕಿತ್ಸೆ ಪಡೆದುಕೊಂಡಿರಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದ ಕಾರಣ ಸಕ್ಕುಬಾಯಿ ಅವರ ಕಣ್ಣಿನಲ್ಲಿ ಪೊರೆ ಬಂದಿತ್ತು. ನೋವು ಕೂಡ ಹೆಚ್ಚಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಹಣ ಬರಲು ಆರಂಭವಾಯಿತು. ಸಕ್ಕುಬಾಯಿ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣವನ್ನು 10 ತಿಂಗಳುಗಳ ಕಾಲ ಕೂಡಿಟ್ಟು ಒಟ್ಟು 20 ಸಾವಿರ ರೂಪಾಯಿಗಳು ಸಂಗ್ರಹಿಸಿಕೊಂಡಿದ್ದಾರೆ.
ಬಳಿಕ ರಾಮದುರ್ಗ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಸಕ್ಕುಬಾಯಿ ಅವರ ಕಣ್ಣಿನ ಸಮಸ್ಯೆ ನಿವಾರಣೆಯಾಗಿದೆ. ಸದ್ಯ ಸಂತಸಗೊಂಡಿರುವ ಸಕ್ಕುಬಾಯಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.