ಸೌಹಾರ್ದತೆಗೆ ಸಾಕ್ಷಿಯಾದ ಕುಂಬ್ರದ ಚಿನ್ನಯ ಆಚಾರ್ಯ
ಪುತ್ತೂರು: ಸೌಹಾರ್ದತೆ ಎನ್ನುವುದು ಈ ನೆಲದ ಉಸಿರು ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. 125 ವರ್ಷಗಳ ಇತಿಹಾಸ ಇರುವ ಪುರಾತನ ಕುಂಬ್ರ ಶೇಕಮಲೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಮಸೀದಿಯ ಹಳೆಯ ಹಂಚಿನ ಮಾಡಿನ ರೀಪು ತೆಗೆದು
ಹೊಸ ರೀಪು ಜೋಡಿಸುವ ಕೆಲಸ ಇತ್ತೀಚೆಗೆ ನಡೆದಿದ್ದು ಹತ್ತು ದಿವಸಗಳ ಕಾಲ ನಡೆದ
ಈ ಕೆಲಸದಲ್ಲಿ ಉಚಿತವಾಗಿ ಸೇವೆ ಮಾಡುವ ಮೂಲಕ ಕುಂಬ್ರದ ಚಿನ್ನಯ ಆಚಾರ್ಯ ಎಂಬವರು ಸೌಹಾರ್ದದ ಸಂದೇಶ ಸಾರಿದ್ದಾರೆ.
ಚಿನ್ನಯ ಆಚಾರ್ಯ ಅವರನ್ನು ಈದುಲ್ ಫಿತರ್ (ಪೆರುನ್ನಾಳ್) ದಿನದಂದು ಶೇಕಮಲೆ ಮಸೀದಿಯ ವತಿಯಿಂದ ಸನ್ಮಾನ ಮಾಡಿ ಗೌರವಾರ್ಪಣೆ ಮಾಡಲಾಯಿತು. ನೂರಾರು ಜನರ ಸಮ್ಮುಖದಲ್ಲಿ ನಡೆದ ಈ ಅರ್ಥಪೂರ್ಣ ಕಾರ್ಯಕ್ರಮ ನಾಡಿನ ಸೌಹಾರ್ದತೆ, ಪ್ರೀತಿ,ವಿಶ್ವಾಸ ಹಾಗೂ ಗೌರವಕ್ಕೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಮಸೀದಿಯ ಗೌರವಾಧ್ಯಕ್ಷ ಕೆ ಪಿ ಅಹ್ಮದ್ ಹಾಜಿ ಆಕರ್ಷಣ್, ಅಧ್ಯಕ್ಷ
ಎಸ್ ಎಂ ಸುಲೈಮಾನ್ ಹಾಜಿ, ಸ್ಥಳೀಯ ಮುದರ್ರಿಸ್ ಹಮೀದ್ ಲತೀಪಿ, ಉಸ್ತಾದ್ ಎಸ್ ಐ ಮಹಮ್ಮದ್ ಶೇಕಮಲೆ, ಎಸ್ ಎಂ ಅಹ್ಮದ್ ಬಶೀರ್ ಹಾಜಿ, ಎಸ್ ಎಂ ಸಿದ್ದೀಕ್ ಹಾಜಿ, ಕೆ ಪಿ ಸಾದಿಕ್ ಹಾಜಿ ಆಕರ್ಷಣ್, ಇಸ್ಮಾಯಿಲ್ ಹಾಜಿ ಕೌಡಿಚಾರ್, ಎಸ್ ಅಬ್ಬಾಸ್ ಶೇಕಮಲೆ, ಹಾಜಿ ಹಸನ್ ಕುಂಞಿ ಬೊಳ್ಳಾಡಿ, ಹಾಜಿ ಅಲೀ ಮಾಸ್ಟರ್ ಕುಂಬ್ರ, ಬಶೀರ್ ಕೌಡಿಚಾರ್, ಇಕ್ಬಾಲ್ ಹುಸೈನ್ ಕೌಡಿಚಾರ್, ಮಹಮ್ಮದ್ ಬೊಳ್ಳಾಡಿ, ಮೊಯಿದೀನ್ ಅಲಂಗೂರು, ಎಸ್ ಎಂ ಮಹಮ್ಮದ್ ಕುಂಞಿ ಕುಂಬ್ರ, ಎಸ್ ಎಂ ಅಬ್ದುಲ್ ರಹಿಮಾನ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಸ್ ಪಿ ಬಶೀರ್ ಶೇಕಮಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.
ಚಿನ್ನಯ ಆಚಾರ್ಯರವರು ಕಳೆದ ಹಲವು ವರ್ಷಗಳಿಂದ ದೇವಸ್ಥಾನ, ದೈವಸ್ಥಾನ, ಮಸೀದಿ, ಮಂದಿರ ಹಾಗೇ ಶಾಲೆ, ಕಾಲೇಜುಗಳಲ್ಲಿ ಮರದ ಕೆಲಸಗಳನ್ನು ಉಚಿತವಾಗಿ ಮಾಡಿಕೊಂಡು ಬಂದಿದ್ದಾರೆ.ಇದೊಂದು ಸೇವೆ ಎನ್ನುತ್ತಿರುವ ಇವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹಲವು ಮಂದಿ ಇವರನ್ನು ಗುರುತಿಸಿ ಗೌರವಿಸಿದ್ದಾರೆ.