ಕರಾವಳಿರಾಜಕೀಯ

ಬಿಜೆಪಿಯೊಂದಿಗೆ ಜೆ.ಡಿ.ಎಸ್ ಮೈತ್ರಿಗೆ ವಿರೋಧ: ಸುಳ್ಯ ತಾಲೂಕು ಜೆ.ಡಿ.ಎಸ್ ಮುಸ್ಲಿಂ ಮುಖಂಡರುಗಳ ಸಾಮೂಹಿಕ ರಾಜೀನಾಮೆ

ಸುಳ್ಯ: ಸುಮಾರು 40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದೇವೆ. ಇದೀಗ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಜೆಡಿಎಸ್ ಪಕ್ಷದಲ್ಲಿ ದುಡಿದದ್ದು ಭವಿಷ್ಯವನ್ನೇ ಹಾಳು ಮಾಡಿದಂತಾಗಿದೆ ಎಂದು ಕರ್ನಾಟಕ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಮೊಹಮ್ಮದ್ ಇಕ್ಬಾಲ್ ಎಲಿಮಲೆ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.


ಸುಳ್ಯ ತಾಲೂಕಿನ ಜನತಾದಳ ರಾಜ್ಯ ಸಮಿತಿ ಜಿಲ್ಲಾ ಸಮಿತಿ ತಾಲೂಕು ಸಮಿತಿಯ ಪದಾಧಿಕಾರಿಗಳಾಗಿ ಸುಮಾರು 40 ವರುಷಗಳಿಂದ ಪಕ್ಷದಲ್ಲಿ ಜಾತ್ಯಾತೀತ ಸಿದ್ಧಾಂತ ಸಾಮಾಜಿಕ ನ್ಯಾಯದ ನಿಲುವಿಗೆ ಬದ್ಧರಾಗಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುತ್ತೇವೆ.

ಪ್ರಕೃತ ಪಕ್ಷದ ರಾಜಕೀಯ ತೀರ್ಮಾನವಾದ ಎನ್ ಡಿ ಎ ಒಕ್ಕೂಟದೊಂದಿಗೆ ಚುನಾವಣಾ ಮೈತ್ರಿ ಯನ್ನು ಮಾಡಿಕೊಂಡಿರುವುದನ್ನು ಒಪ್ಪಿಕೊಳ್ಳಲು ಅಸಾಧ್ಯವಾಗಿರುವುದರಿಂದ ಜನತಾದಳ ಜಾತ್ಯಾತೀತ ಪಕ್ಷದಲ್ಲಿ ತೊಡಗಿಸಿ ಕೊಳ್ಳಲು ನಮಗೆ ಅಸಾಧ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸಮಾನಮನಸ್ಕರಾದ ನಾವೆಲ್ಲರೂ ಒಟ್ಟಾಗಿ ಜನತಾದಳ ಪಕ್ಷದ ಪ್ರಾಥಮಿಕ ಸದಸ್ಯತಕ್ಕೆ ಈ ದಿನ ರಾಜೀನಾಮೆ ಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ,ರಾಜ್ಯಧ್ಯಕ್ಷರಿಗೆ ಸಲ್ಲಿಸಿರುತ್ತೇವೆ.
ಈಗಾಗಲೇ ನಮ್ಮನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾದ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಡಿ ಕೆ. ಶಿವಕುಮಾರ್ ರವರು ಕಾಂಗ್ರೆಸ್ ಪಕ್ಷಕ್ಕೆ, ಸೇರ್ಪಡೆಗೊಳ್ಳುವ ಆಹ್ವಾನವನ್ನು ನೀಡಿರುತ್ತಾರೆ. ಈ ಬಗ್ಗೆ ನಾವೆಲ್ಲರೂ ಈ ದಿನಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರ ನೇತೃತ್ವದ ರಾಜ್ಯ ಸರ್ಕಾರವು ಆಡಳಿತಕ್ಕೆ ಬಂದ ನಂತರ ಸರಕಾರದ ಜನಪರ ಕಾರ್ಯಕ್ರಮಗಳೊಂದಿಗೆ ಹಾಗೂ ರಾಜ್ಯದ ಜನತೆ ಸಾಮಾಜಿಕ ನ್ಯಾಯ ಶಾಂತಿ ಸೌಹಾರ್ದತೆ ಸಾಮರಸ್ಯದ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗಿರುತ್ತದೆ. ಅಲ್ಲದೆ ಈ ಸಂಬಂಧ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಮಾಜಿ ಸಚಿವರು ಬಿ ರಮಾನಾಥ ರೈ. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹರೀಶ್ ಕುಮಾರ್. ಕೆ.ಪಿ.ಸಿ.ಸಿ.ಯ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ. ಸಿ. ಜಯರಾಮ್. ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಎಮ್. ವೆಂಕಪ್ಪಗೌಡ. ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ರೈ. ಅರೆ ಭಾಷೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಾಜಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ. ಎಸ್. ಗಂಗಾಧರ ಮೊದಲಾದ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು ನಾವಲ್ಲರೂ ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುವ ಬಗ್ಗೆ ತೀರ್ಮಾನವನ್ನು ಕೈಗೊಂಡಿರುತ್ತೇವೆ ಎಂದು ಅವರು ಹೇಳಿದರು.
ಈ ವೇಳೆ ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್ ರವರು ಕೂಡ ಮಾತನಾಡಿ ಜಾತ್ಯತೀತ ನಿಲುವಿನಲ್ಲಿ ಇರುವ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಒಪ್ಪುವಂತಿದ್ದು ಶಾಂತಿ ಮತ್ತು ಸೌಹಾರ್ದಯುಕ್ತ ಭಾರತಕ್ಕಾಗಿ ಈ ಚುನಾವಣೆಯಲ್ಲಿ ಎಲ್ಲರೂ ಒಂದಾಗಬೇಕಾಗಿದೆ. ಮತ್ತು ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಬೇಕಾಗಿದೆ ಎಂದು ಹೇಳಿದರು. ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುವ ದಿನದಂದು ನಾನು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇನೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಸುಳ್ಯ ಬ್ಲಾಕ್ ಉಪಾಧ್ಯಕ್ಷ ಹಾಜಿ ಉಮರ್ ಗೂನಡ್ಕ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮುಖಂಡರುಗಳಾದ ಕೆ ಎ ಉಮ್ಮರ್ ಫಾರೂಕ್ ಕಳಂಜ, ಎನ್ ಇಸ್ಮಾಯಿಲ್ ಕಳಂಜ, ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಎಬಿ ಮೋಹಿದೀನ್, ಉಪಾಧ್ಯಕ್ಷ ಇಬ್ರಾಹಿಂ ಕೊಳಂಬೆ, ಕಾರ್ಯದರ್ಶಿ ಖಾದರ್ ಮೊಟ್ಟೆಂಗರ್, ಮುಖಂಡರಾದ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು, ಕೆಎಂ ಮಹಮ್ಮದ್ ಹಾಜಿ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!