ಟಿಕೆಟ್ ಕೈ ತಪ್ಪುವ ವದಂತಿ ಮಧ್ಯೆ ಭಾವುಕ ಮಾತುಗಳನ್ನಾಡಿದ ಸಂಸದ ಪ್ರತಾಪ್ ಸಿಂಹ
ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಲಿದೆ ಎಂಬ ವದಂತಿಗಳ ಬೆನ್ನಲ್ಲೇ ಮಾ.11ರಂದು ರಾತ್ರಿ ಫೇಸ್ಬುಕ್ ಲೈವ್ ಮೂಲಕ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಮತ್ತೆ ಟಿಕೆಟ್ ಸಿಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೊಡಗಿನ ಜನ ತೋರಿಸಿದ ಪ್ರೀತಿಯನ್ನು ಮರೆಯಲಾರೆ. ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ ಎಂದು ಭಾವುಕರಾದರು.
ಸ್ವಾರ್ಥಕ್ಕಾಗಿ ಯಾರ ಮನೆ ಬಾಗಿಲನ್ನೂ ನಾನು ತಟ್ಟಿಲ್ಲ. ಟಿಕೆಟ್ ಸಿಗುತ್ತೋ, ಸಿಗಲ್ವೋ ಚಾಮುಂಡಿ ನಿರ್ಧರಿಸುತ್ತಾಳೆ. ನನ್ನ ಏಳಿಗೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದಿರುವ ಪ್ರತಾಪ್ ಸಿಂಹ, 10 ವರ್ಷಗಳ ರಾಜಕಾರಣದ ಬಗ್ಗೆ ಮಾತುಗಳನ್ನಾಡಿದರು. ನನ್ನಿಂದ ಯಾರು ಸಹ ಸೋತಿಲ್ಲ. ನನ್ನ ವಿರುದ್ಧ ಏಕೆ ಇಲ್ಲಸಲ್ಲದ ಆರೋಪ ಮಾಡುತ್ತೀರಿ? ನನ್ನ ಕ್ಷೇತ್ರದಾಚೆಗೂ ಜನ ಪ್ರೀತಿ ವಿಶ್ವಾಸ ತೋರಿಸುತ್ತಿದ್ದಾರೆ. ಈಗಲೂ ಪಕ್ಷ ಟಿಕೆಟ್ ಕೊಡುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ರಾಜಕಾರಣದಲ್ಲಿ ಏನಾದರೂ ಆಗಬಹುದು. ನಾನು ಈಗ ಎಂಪಿ ಆಗಿದ್ದೀನಿ, ಮುಂದಕ್ಕೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ. 10 ವರ್ಷ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ಪ್ರತಾಪ್ ಸಿಂಹ ಹೇಳಿದರು.