ಕರಾವಳಿರಾಜಕೀಯರಾಜ್ಯ

ಎಂ.ಎಸ್ ಮಹಮ್ಮದ್ ಅವರಿಗೆ ಸಿಗದ ಸೂಕ್ತ ಸ್ಥಾನಮಾನ: ಅಭಿಮಾನಿಗಳ ಆಕ್ರೋಶ

ಮಂಗಳೂರು: ಕಾಂಗ್ರೆಸ್ ಮುಖಂಡ, ಜಿ.ಪಂ ಮಾಜಿ ಉಪಾಧ್ಯಕ್ಷರೂ ಆಗಿರುವ ಎಂ.ಎಸ್ ಮಹಮ್ಮದ್ ಅವರಿಗೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ ಎನ್ನುವ ಆರೋಪ ಮತ್ತು ಆಕ್ರೋಶ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿದ್ದು ಇದೀಗ ನೊಂದ ಕಾರ್ಯಕರ್ತನೋರ್ವ ಬರೆದಿರುವ ಬರಹ ಜಾಲತಾಣದಲ್ಲಿ ವೈರಲ್ ಕೂಡಾ ಆಗಿದೆ.

ಎಂ.ಎಸ್ ಮಹಮ್ಮದ್ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ತನ್ನ ಜೀವವನ್ನೇ ಪಣಕ್ಕಿಡಲೂ ಸಿದ್ದರಿರುವಂತಹ ಓರ್ವ ನಿಸ್ವಾರ್ಥ ವ್ಯಕ್ತಿಯಾಗಿದ್ದು ಕಾಂಗ್ರೆಸ್ ತನ್ನ ಉಸಿರು ಎನ್ನುವ ರೀತಿಯಲ್ಲಿ ಅವರು ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದಾರೆ, ಹತ್ತಾರು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿ ಪಕ್ಷಕ್ಕಾಗಿ ದೊಡ್ಡ ಕೊಡುಗೆ ನೀಡುತ್ತಾ ಬಂದಿರುವ ಎಂ.ಎಸ್ ಮಹಮ್ಮದ್ ಅವರನ್ನು ಕಾಂಗ್ರೆಸ್ ಯಾಕಾಗಿ ಕಡೆಗಣಿಸುತ್ತಿದೆ ಎಂದು ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇತ್ತೀಚೆಗೆ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕವಾಗಿದ್ದು ಅದರಲ್ಲಿ ಎಂ.ಎಸ್ ಮಹಮ್ಮದ್ ಅವರಿಗೆ ಸ್ಥಾನಮಾನ ಸಿಗಬಹುದೆಂದು ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ಆ ನಿರೀಕ್ಷೆಯೂ ಹುಸಿಯಾಗಿದೆ, ರಾಜಕೀಯವಾಗಿ ಅವರಿಗೆ ಯಾವುದೇ ಸ್ಥಾನಮಾನ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಎಂ.ಎಸ್ ಮಹಮ್ಮದ್ ಅವರು ಅಪ್ಪಟ ಜಾತ್ಯಾತೀತವಾದಿಯಾಗಿದ್ದು ಎಲ್ಲ ಜಾತಿ, ಧರ್ಮದವರನ್ನು ಗೌರವಿಸುತ್ತಾ ಎಲ್ಲ ಧರ್ಮದವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ, ಅದರಲ್ಲೂ ಮುಸ್ಲಿಂ ಸಮುದಾಯದ ಓರ್ವ ಪ್ರಭಾವೀ ರಾಜಕೀಯ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ, ದಿನನಿತ್ಯ ಹಲವು ವೇದಿಕೆಗಳಲ್ಲಿ ಎಂ.ಎಸ್ ಕಾಣಿಸಿಕೊಳ್ಳುತ್ತಿದ್ದಾರೆ, ಎಲ್ಲ ಅರ್ಹತೆ ಇದ್ದರೂ ಅವರಿಗೆ ಉತ್ತಮ ಮಟ್ಟದ ಸ್ಥಾನಮಾನ ಯಾಕೆ ನೀಡುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಅವರ ಬೆಂಬಲಿಗರು ಮುಂದಿಟ್ಟಿದ್ದು ಮುಂದಕ್ಕೂ ಈ ರೀತಿಯ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರುತ್ತಿದ್ದಾರೆ.

ಇದೀಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇರುವುದರಿಂದ ಎಂ.ಎಸ್ ಮಹಮ್ಮದ್ ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಯಾವುದೇ ತೊಂದರೆಯಿಲ್ಲ, ಆದರೂ ಅವರಿಗೆ ಯಾವುದೇ ಹುದ್ದೆ ಸಿಗುತ್ತಿಲ್ಲ ಎಂದಾದರೆ ಇದಕ್ಕೇನು ಅರ್ಥ ಎಂದು ಪ್ರಶ್ನಿಸುತ್ತಿರುವ ಬೆಂಬಲಿಗರು, ಎಂ.ಎಸ್ ಮಹಮ್ಮದ್ ಅವರಿಗೆ ಉನ್ನತ ಹುದ್ದೆ ಸಿಗದಂತೆ ಯಾರಾದರೂ ಅಡ್ಡಗಾಲು ಹಾಕುತ್ತಿರಬಹುದೇ ಎಂದೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಎಂ.ಎಸ್ ಮುಹಮ್ಮದ್ ಅವರಿಗೆ ನಿಗಮ ಮಂಡಳಿಯಲ್ಲೂ ಸ್ಥಾನ ಸಿಗದಿರುವ ಬಗ್ಗೆ ದ.ಕ ಜಿಲ್ಲೆಯ ಅವರ ಬೆಂಬಲಿಗರು ಮತ್ತು ಅನೇಕ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸಹಿತ ಉನ್ನತ ಮಟ್ಟದ ನಾಯಕರನ್ನು ಭೇಟಿಯಾಗಲು ಸಿದ್ದತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!