ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಪುತ್ತೂರು ತಾಲೂಕಿನ ಎನ್.ಆರ್.ಐ ಉದ್ಯಮಿಗಳಿಂದ ಸೌದಿ ಅರೇಬಿಯಾದಲ್ಲಿ ಸನ್ಮಾನ
ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಅಶೋಕ್ ಕುಮಾರ ರೈ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಜಿ ಆಗಿರುವ ವಕೀಲರಾದ ಪದ್ಮರಾಜ್ ಆರ್ ಅವರನ್ನು ಜುಬೈಲ್‌ನಲ್ಲಿರುವ ಪುತ್ತೂರಿನ ಅನಿವಾಸಿ ಉದ್ಯಮಿಗಳು ಜುಬೈಲ್‌ನ ಪುಲಿ ರೆಸ್ಟೋರೆಂಟ್‌ನಲ್ಲಿ ಸನ್ಮಾನಿಸಿದರು.
ಪುತ್ತೂರು ತಾಲೂಕಿನ ಸೌಹಾರ್ದತೆ ಮತ್ತು ಅಭಿವೃದ್ಧಿಯ ಕಾರ್ಯದಲ್ಲಿ ಶಾಸಕರೊಂದಿಗೆ ಕೈ ಜೋಡಿಸುವ ಭರವಸೆ ನೀಡಿದ ಎನ್.ಆರ್.ಐ.ಗಳು ತಾಲೂಕಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಿಸುವ ಬಗ್ಗೆ ಹಾಗೂ ಈಗಾಗಲೇ ಮಂಜೂರಾಗಿರುವ ಕ್ರೀಡಾಂಗಣದ ಅಭಿವೃದ್ಧಿಗೆ ಮುತುವರ್ಜಿ ವಹಿಸಿರುವ ಶಾಸಕ ಅಶೋಕ್ ರೈ ಅವರ ಪ್ರಯತ್ನವನ್ನು ಶ್ಲಾಘಿಸಿದರು.
ಸೌದಿಯಲ್ಲಿ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಆಗಮಿಸಿದ್ದ ಶಾಸಕರನ್ನು ಅರಬ್ ರಾಷ್ಟ್ರದ ವಿವಿಧ ಭಾಗಗಳಲ್ಲಿ ಉದ್ಯಮ ಮತ್ತು ವ್ಯವಹಾರಗಳಲ್ಲಿ ತೊಡಗಿಸಿರುವ ಪುತ್ತೂರಿನ ಅನಿವಾಸಿಗಳು ಸ್ವಾಗತಿಸಿ ಅವರೊಂದಿಗೆ ಹಲವು ವಿಷಯಗಳ ಕುರಿತು ಸಮಾಲೋಚಿಸಿದರು. ಈ ಸಂದರ್ಭ ಶಾಸಕರಾದ ಅಶೋಕ್ ರೈ ಅವರು ತಾಲೂಕಿನ ಪ್ರಗತಿಗೆ ಅನಿವಾಸಿಗಳ ಕೊಡುಗೆಯನ್ನು ಸ್ಮರಿಸಿದರು.
ಸ್ಕಾಲರ್‌ಶಿಪ್ ಬಗ್ಗೆ ಚರ್ಚೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ವಿಚಾರದ ಬಗ್ಗೆ ಎನ್‌ಆರ್‌ಐಗಳು ಶಾಸಕ ಅಶೊಕ್ ಕುಮಾರ್ ರೈ ಜೊತೆ ಇದೇ ವೇಳೆ ಚರ್ಚೆ ನಡೆಸಿದರು.
ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದ ಅನಿವಾಸಿಗಳ ಪೈಕಿ ಉದ್ಯಮಿ, ಜೆಸಿಸಿ ಕೆ.ಐ.ಸಿ ಗಲ್ಫ್ ಕಮಿಟಿಯ ಅಧ್ಯಕ್ಷರಾದ ಅಶ್ರಫ್ ಶಾ ಮಾಂತೂರು, ಕೆ.ಐ.ಸಿ ಜುಬೈಲ್ ಅಧ್ಯಕ್ಷರಾದ ಉದ್ಯಮಿ ತಾಹಿರ್ ಸಾಲ್ಮರ, ಪುತ್ತೂರು ಕಮ್ಯುನಿಟಿ ಸೆಂಟರ್‌ನ ಅಧ್ಯಕ್ಷರಾದ ಅಮ್ಜದ್ ಖಾನ್ ಪೊಳ್ಯ, ಉದ್ಯಮಿಗಳಾದ ಫೈರೋಝ್ ಪರ್ಲಡ್ಕ, ಲತೀಫ್ ಮರಕ್ಕನಿ, ಇಸ್ಮಾಯಿಲ್ ಕೂರ್ನಡ್ಕ, ನಿಝಾಮ್ ಅರಂಡ, ಹಾರಿಸ್ ಅರಂಡ, ಆಸಿಫ್ ದರ್ಬೆ, ಫೈಝಲ್ ಉಪ್ಪಿನಂಗಡಿ, ಮುಸ್ತಾಕ್ ಕೋಡಿಂಬಾಡಿ, ಸುಹೈಲ್ ಕೋಡಿಂಬಾಡಿ, ಶರೀಫ್ ನೆಕ್ಕಿಲಾಡಿ ಹಾಗೂ ಇತರರು ಉಪಸ್ಥಿತರಿದ್ದರು. ಫಾರೂಕ್ ಪೋರ್ಟ್‌ವೇ ವಂದಿಸಿದರು.