ಬಿಜೆಪಿ ಮುಂದೆ ಮೂರು ಪ್ರಮುಖ ಬೇಡಿಕೆ ಇಟ್ಟ ಪುತ್ತಿಲ ಪರಿವಾರ
ಪುತ್ತೂರು: ಪುತ್ತಿಲ ಪರಿವಾರದ ಜಿಲ್ಲಾ ಸಮಾಲೋಚನಾ ಸಭೆ ಫೆ.5ರಂದು ಕೊಟೆಚಾ ಹಾಲ್ ನಲ್ಲಿ ನಡೆಯಿತು. ಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು.
*ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷತೆಯನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡಬೇಕು. *ಅಧ್ಯಕ್ಷ ಸ್ಥಾನ ಅರುಣ್ ಕುಮಾರ್ ಪುತ್ತಿಲ ಅವರಿಗೆ ಕೊಟ್ಟರೆ ಮಾತ್ರ ಮಾತೃಪಕ್ಷದೊಂದಿಗೆ ಪುತ್ತಿಲ ಪರಿವಾರವನ್ನು ವಿಲೀನಗೊಳಿಸಲಾಗುವುದು. *ಒಂದು ವೇಳೆ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಥಾನ ಕೊಡುವಲ್ಲಿ ಮಾತ್ರ ಪಕ್ಷ ವಿಫಲವಾದರೆ ಮುಂದೆ ಎಲ್ಲಾ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎನ್ನುವ ಮೂರು ಪ್ರಮುಖ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಘೋಷಣೆ ಮಾಡಿದ್ದಾರೆ
ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಪುತ್ತಿಲ ಪರಿವಾರದ ಮುಖಂಡರ, ಕಾರ್ಯಕರ್ತರ ತೀರ್ಮಾನಕ್ಕೆ ನಾನು ಬದ್ದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 718 ವಾಟ್ಸಪ್ ಗ್ರೂಪ್ ಗಳಲ್ಲಿ 4.23 ಲಕ್ಷ ಮಂದಿ ಕಾರ್ಯಕರ್ತರು ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಇದ್ದಾರೆ. ಚುನಾವಣೆಯಲ್ಲಿ ಗೆಲ್ಲೋದು ನಮಗೇನು ದೊಡ್ಡ ಸಂಗತಿಯೇ ಅಲ್ಲ, ಹಾಗಾಗಿ ಮಾತೃಪಕ್ಷ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಪುತ್ತಿಲ ಪರಿವಾರದ ಬೇಡಿಕೆ ಬಗ್ಗೆ ಬಿಜೆಪಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿದ್ದು ಅರುಣ್ ಕುಮಾರ್ ಪುತ್ತಿಲರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಥಾನ ಕೊಡುತ್ತಾ ಅಥವಾ ಬೇರೆ ಸ್ಥಾನಮಾನ ನೀಡುತ್ತಾ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.