ಕರಾವಳಿರಾಜ್ಯ

ಪುತ್ತೂರು ಕಮ್ಯೂನಿಟಿ ಸೆಂಟರ್’ಗೆ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಭೇಟಿ



ಪುತ್ತೂರು: ಎರಡು ವರ್ಷಗಳಿಂದ ವಿದ್ಯಾರ್ಥಿ ವೇತನದ ಹಣ ಖಾತೆಗೆ ಜಮೆಯಾಗದ ಹಿನ್ನೆಲೆಯಲ್ಲಿ, ಕಮ್ಯುನಿಟಿ ಸೆಂಟರಿನ ವಿದ್ಯಾರ್ಥಿಗಳು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಅವರಿಗೆ ಮನವಿ ಸಲ್ಲಿಸಿದರು.

ಎನ್.ಎಸ್.ಪಿ/ ಎಸ್.ಎಸ್.ಪಿ ವಿದ್ಯಾರ್ಥಿ ವೇತನದಲ್ಲಿ ಪಿಯುಸಿ, ಪದವಿ ಹಾಗೂ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇದುವರೆಗೂ ಯಾವುದೇ ಹಣ ಬಂದಿಲ್ಲ. ಎರಡು ವರ್ಷಗಳಿಂದ ಈ ಬಗ್ಗೆ ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಇಲಾಖೆಯ ಕಛೇರಿಯಲ್ಲಿ ತಮ್ಮ ಅಹವಾಲು ಹೇಳಿದರೂ ಇಂದು ಬರಬಹುದು, ನಾಳೆ ಬರಬಹುದು ಎಂಬ ಉತ್ತರ ಬರುತ್ತಿದೆ. ರಾಜಕೀಯ ನಾಯಕರು, ಅಧಿಕಾರಿಗಳು ಹಾಗೂ ಸಮುದಾಯ ಕೇಂದ್ರಗಳೂ ಈ ಬಗ್ಗೆ ಯಾವುದೇ ಮುತುವರ್ಜಿ ತೋರಿಸುತ್ತಿಲ್ಲ. ಸರಕಾರಕ್ಕೆ ಬಲವಾಗಿ ಒತ್ತಾಯಿಸುವ ಅಥವಾ ವಿದ್ಯಾರ್ಥಿಗಳಿಗೆ ಸ್ಪಂದಿಸುವ ಯಾವುದೇ ಪ್ರಯತ್ನ ಫಲು ಆಗುತ್ತಿಲ್ಲ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದು, ಪದವಿ ಶಿಕ್ಷಣದಲ್ಲಿ ಎರಡನೇ ವಾರ್ಷಿಕ ಅವಧಿಗೆ ಕಾಲೇಜಿಗೆ ಹೋಗುವುದನ್ನೂ ನಿಲ್ಲಿಸಿದ ಸಾಕಷ್ಟು ಉದಾಹರಣೆಗಳು ಇದೆ ಎಂದು ಹಲವು ಶೈಕ್ಷಣಿಕ ಸೇವಾ ಕಾರ್ಯಕರ್ತರು ನೀಡಿದ ಮಾಹಿತಿಯನ್ನು ಗಮನಿಸಿದ ಪುತ್ತೂರು ಕಮ್ಯೂನಿಟಿ ಸೆಂಟರ್, ಫೆ.2ರಂದು ಸೆಂಟರಿಗೆ ಭೇಟಿ ಕೊಟ್ಟ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಿಗೆ ವಿದ್ಯಾರ್ಥಿಗಳ ಮೂಲಕ ಈ ಮನವಿ ಸಲ್ಲಿಸಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷದಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ವಿದ್ಯಾರ್ಥಿ ವೇತನವೂ ಸಿಕ್ಕಿಲ್ಲ. ಗ್ರಾಮಾಂತರ ಹಾಗೂ ನಗರ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನೇ ಆಶ್ರಯಿಸಿ ಪಧವಿ ಹಾಗೂ ಉನ್ನತ ವ್ಯಾಸಾಂಗಕ್ಕೆ ಸಾಗುತ್ತಾರೆ. ವಿದ್ಯಾರ್ಥಿಗಳು ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸಿ ಅರ್ಜಿ ಸಲ್ಲಿಸಿದರೂ ವಿದ್ಯಾರ್ಥಿ ವೇತನ ಇದುವರೆಗೂ ಬಂದಿಲ್ಲ. ಸುಮಾರು 75 ಕೋಟಿ ರುಪಾಯಿ ಬಿಡುಗಡೆ ಆಗಿದೆ ಎಂದು ಸರಕಾರವು ಹೇಳಿದ್ದರೂ ಹಣವು ಯಾವುದೇ ವಿದ್ಯಾರ್ಥಿಗಳ ಖಾತೆಗೂ ಬಂದಿರುವುದಿಲ್ಲ. ಈ ಹಣವು ಏನಾಗಿದೆ ಎಂಬ ಮಾಹಿತಿಯೂ ಅಧಿಕಾರಿಗಳಲ್ಲಿ ಇಲ್ಲ. ವಿದ್ಯಾರ್ಥಿಗಳ ದಾಖಲೆಗಳು, ಬೆರಳಚ್ಚು ಹಾಗೂ ಮಾಹಿತಿಗಳು ನೀಡಿದರೂ ಹಣವು ಅವರ ಖಾತೆಗೆ ಬರದ ಬಗ್ಗೆ ಸಂಶಯಗಳಿವೆ. ಆದ್ದರಿಂದ ಬಿಡುಗಡೆಯಾದ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡುವಂತೆ ಕ್ರಮ ಕೈಗೊಳ್ಳಲು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ಆಯೋಗದ ಅಧ್ಯಕ್ಷರು ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!