ಕರಾವಳಿ

ಮಕ್ಕಳಿಗೆ ಸಂಸ್ಕಾರ ಕಲಿಸದೇ ಇದ್ದರೆ ಆಶ್ರಮದಲ್ಲಿ ಮಲಗಬೇಕಾದೀತು: ಅಶೋಕ್ ರೈ

ಪುತ್ತೂರು: ನಿಮ್ಮ ಮಕ್ಕಳಿಗೆ ಕೇವಲ ಲೌಕಿಕ ಶಿಕ್ಷಣವನ್ನು ಮಾತ್ರ ಕೊಡಬೇಡಿ ಅದರ ಜೊತೆಗೆ ನಮ್ಮ ಸಂಸ್ಕಾರ ಶಿಕ್ಷಣವನ್ನು ಕೊಡಿಸಿ, ಮನುಷ್ಯ ಜೀವವನ್ನು ಪ್ರೀತಿಸಲು ಇಲ್ಲದೇ ಇದ್ದರೆ ಮುದಿ ಪ್ರಾಯದಲ್ಲಿ ಆಶ್ರಮದಲ್ಲಿ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಜೈನರ ಭವನದಲ್ಲಿ ನಡೆದ ಸಂಪ್ಯ ಆನಂದಾಶ್ರಮ ಇದರ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದರು.

ಒಂದು ದೇಶದಲ್ಲಿ ಆಶ್ರಮದ ಸಂಖ್ಯೆ ಅಧಿಕವಾಗುತ್ತಲೇ ಇದ್ದರೆ ಅಲ್ಲಿ ಸಂಸ್ಕಾರ ಇರುವ ಮಕ್ಕಳಿಲ್ಲ ಎಂದು ನಾವು ಭಾವಿಸಬೇಕು. ಹೆತ್ತು ಹೊತ್ತು, ಕಷ್ಟಪಟ್ಟು ಸಾಕಿದ ಮಕ್ಕಳು ಒಂದು ಹಂತಕ್ಕೆ ಬೆಳೆದಾಗ ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸಿ ಯಾವುದೋ ದೇಶದಲ್ಲಿ ಸೆಟ್ಲ್ ಆಗಿ ಬಿಡುತ್ತಾರೆ. ಮುದಿ ಪ್ರಾಯದಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕಾದ ಹಿರಿಯ ಜೀವಗಳು ಆಶ್ರಮದ ಕಿಟಕಿಯ ಸರಳುಗಳನ್ನು ಎಣಿಸಿ ದಿನ ದೂಡಬೇಕಾದ ಅನಿವಾರ್ಯತೆ ಯಾವ ತಂದೆ ತಾಯಿಗಳಿಗೂ ಬಾರದಿರಲಿ. ನಾವು ನಮ್ಮ ದೇಹದ ಶಕ್ತಿ ಕಳೆದುಕೊಂಡಾಗ ನಮಗೆ ಮಕ್ಕಳು ಆಶ್ರಯ ಕೊಡಬೇಕಾದರೆ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ಕುಟುಂಬ ಸಂಬಂಧಗಳನ್ನು ಕಲಿಸಿಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಷ್ಟವನ್ನು ಎದುರಿಸಬೇಕಾಗಿ ಬರಬಹುದು ಎಂದರು.

ಸಂಪತ್ತು ಶಾಶ್ವತವಲ್ಲ, ಸಂಪತ್ತಿನಿಂದ ಎಲ್ಲವೂ ದೊರೆಯುವುದಿಲ್ಲ. ವಯಸ್ಸಾಗುವ ಕಾಲದಲ್ಲಿ ಮಕ್ಕಳು ನಮ್ಮ ಬಳಿ ಇದ್ದರೆ ಅದುವೇ ನಮಗೆ ದೊಡ್ಡ ಸಂಪತ್ತು ಎಂದು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕಿದೆ ಎಂದು ಅಶೋಕ್ ರೈ ಮಾರ್ಮಿಕವಾಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!