ಬೆಳ್ತಂಗಡಿ: ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷನಿಂದ ವಿದ್ಯಾರ್ಥಿ ಮೇಲೆ ಹಲ್ಲೆ, ಪ್ರಕರಣ ದಾಖಲು
ಬೆಳ್ತಂಗಡಿ: ಪ್ರಾಥಮಿಕ ಶಾಲಾ ವಿದ್ಯಾರ್ಥಿಯೋರ್ವ ಆತನ ಸೈಕಲನ್ನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿದ್ಯಾರ್ಥಿಗೆ ಹಲ್ಲೆ ನಡೆಸಿರುವುದಾಗಿ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.28 ರಂದು ಬೆಳಿಗ್ಗೆ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಪರಮೇಶ ಎಂಬವರು ಬಾಲಕನನ್ನು ವಿಚಾರಿಸಿ ಬಾಲಕನ ತಾಯಿಯ ಸಮಕ್ಷಮದಲ್ಲಿ ಬಾಲಕನಿಗೆ ಸಣ್ಣ ದೊಣ್ಣೆಯಿಂದ ಹಾಗೂ ಕೈಯಿಂದ ಹೊಡೆದಿರುತ್ತಾರೆ. ಈ ವೇಳೆ ಶಾಲಾ ಶಿಕ್ಷಕರಿಬ್ಬರು ಬಾಲಕನಿಗೆ ಹೊಡೆಯಲು ಪ್ರೇರೇಪಿಸಿರುತ್ತಾರೆ. ಹಲ್ಲೆ ನಡೆಸಿದ ಬಳಿಕ ಈ ವಿಚಾರವನ್ನು ಯಾರಿಗಾದರೂ ಹೇಳಿದರೇ ಸೈಕಲ್ ಕದ್ದು ಮಾರಾಟ ಮಾಡಿದ ಬಗ್ಗೆ ಕೇಸು ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ ಬಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಶಾಲೆಯಲ್ಲಿ ನಡೆದ ಹಲ್ಲೆಯಿಂದ ನ. 30 ರಂದು ಬೆಳಿಗ್ಗೆ ಬಾಲಕನಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿರುತ್ತಾರೆ ಎಂಬುದಾಗಿ ಸಂತ್ರಸ್ಥ ಬಾಲಕನು ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಕಲಂ: 323,324,506,114 ಜೊತೆಗೆ 34 ಐಪಿಸಿ ಮತ್ತು ಕಲಂ:75 ಬಾಲನ್ಯಾಯ ಕಾಯಿದೆ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.