ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಮಂದಿಯ ರಕ್ಷಣೆ: ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ಉತ್ತರಾಖಂಡ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಮಂದಿಯ ರಕ್ಷಣೆ ಆಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರ ತಾಳ್ಮೆ, ಧೈರ್ಯ ಮೆಚ್ಚಲೇಬೇಕು ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಸಂದೇಶ ಪ್ರಕಟಿಸಿದ್ದು, ಇದೊಂದು ಭಾವುಕ ಕ್ಷಣ, 17 ದಿನಗಳ ನಂತರ ತಮ್ಮವರನ್ನು ಕಾಣುತ್ತಿರುವ ಕಾರ್ಮಿಕರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಉತ್ತರಕಾಶಿಯ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಮಂದಿ ಕಾರ್ಮಿಕರನ್ನು ಎನ್ಡಿಆರ್ಎಫ್ ಸಿಬ್ಬಂದಿ 17 ದಿನಗಳ ಕಾರ್ಯಾಚರಣೆ ಬಳಿಕ ಸೋಮವಾರ ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ.
‘ಉತ್ತರಕಾಶಿಯಲ್ಲಿ ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಸುರಂಗದಲ್ಲಿ ಸಿಕ್ಕಿಬಿದ್ದ ಸ್ನೇಹಿತರಿಗೆ ನಾನು ಹೇಳಲು ಬಯಸುತ್ತೇನೆ. ನಾನು ನಿಮ್ಮೆಲ್ಲರಿಗೂ ಒಳ್ಳೆಯ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ.
ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಜನರಿಗೆ ನಾನು ನಮಸ್ಕರಿಸುತ್ತೇನೆ. ಅವರ ಶೌರ್ಯ ಮತ್ತು ಸ್ಥೈರ್ಯ ನಮ್ಮ ಕಾರ್ಮಿಕ ಬಂಧುಗಳಿಗೆ ಹೊಸ ಬದುಕನ್ನು ನೀಡಿದೆ ಎಂದು ಎಕ್ಸ್ ಸಂದೇಶದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.