ಬೆಂಗಳೂರು ಕಂಬಳ: ಸಿಎಂ ಸಿದ್ದರಾಮಯ್ಯರಿಗೆ ಆಮಂತ್ರಣ ನೀಡಿದ ಶಾಸಕ ಅಶೋಕ್ ರೈ:
ಬೆಂಗಳೂರು ಕಂಬಳದ ಬಗ್ಗೆ ಸಿಎಂ ಮೆಚ್ಚುಗೆ
ಪುತ್ತೂರು: ನವೆಂಬರ್ 25ಮತ್ತು 26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಕಂಬಳ ಸಮಿತಿ ಅಧ್ಯಕ್ಷರೂ, ಪುತ್ತೂರು ಶಾಸಕರೂ ಆದ ಅಶೋಕ್ ರೈಯವರು ಆಮಂತ್ರಣ ಪತ್ರ ನೀಡಿ ಕಂಬಳಕ್ಕೆ ಆಹ್ವಾನ ನೀಡಿದರು.
ನ.25 ರಂದು ಸಂಜೆ ನಡೆಯುವ ಮುಖ್ಯ ಸಭಾ ಕಾರ್ಯಕ್ರಮವನ್ನು ಸಿದ್ದರಾಮಯ್ಯರವರು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಕಂಬಳದ ಬಗ್ಗೆ ಅಶೋಕ್ ರೈಯವರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಕಂಬಳಕ್ಕೆ ಬರುವ ಅತಿಥಿಗಳು, ಭಾಗವಹಿಸುವ ಲಕ್ಷಾಂತರ ಕಂಬಳಾಭಿಮಾನಿಗಳ ಬಗ್ಗೆಯೂ ಸಿಎಂ ಅವರಿಗೆ ವಿವರಣೆ ನೀಡಿದರು.
ಕರ್ನಾಟಕದ ಇತಿಹಾಸದಲ್ಲೇ ರಾಜ್ಯದ ರಾಜಧಾನಿಯಲ್ಲಿ ತುಳುನಾಡಿನ ಕಂಬಳ ಕ್ರೀಡೆಯನ್ನು ಆಯೋಜನೆ ಮಾಡಿರುವ ಬಗ್ಗೆ ಶಾಸಕರಾದ ಅಶೋಕ್ ರೈ ಯವರನ್ನು ಇದೇ ಸಂದರ್ಭದಲ್ಲಿ ಸಿಎಂ ರವರು ಅಭಿನಂದಿಸಿದರು. ಕಂಬಳಕ್ಕೆ ಬರಲು ನಾನು ರೆಡಿಯಾಗಿದ್ದೇನೆ, ನನಗೆ ಕಂಬಳವನ್ನು ವೀಕ್ಷಿಸಬೇಕು, ಕರಾವಳಿ ಭಾಗದ ಸುಪ್ರಸಿದ್ದ ಜನಪದ ಕ್ರೀಡೆಯನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡುವ ಮೂಲಕ ರಾಜ್ಯದ ಎಲ್ಲಾ ಜನರಿಗೂ, ರಾಜಧಾನಿಯಲ್ಲಿರುವ ದೇಶದ ನಾನಾ ರಾಜ್ಯದ ಜನತೆಗೂ, ವಿದೇಶಿ ಪ್ರವಾಸಿಗರಿಗೂ ಕಂಬಳದ ಸವಿಯನ್ನು ಅನುಭವಿಸುವ ಯೋಗ ದೊರಕಿದೆ ಇದಕ್ಕಾಗಿ ಅಭಿನಂದಿಸುವುದಾಗಿ ಸಿಎಂ ರವರು ಶಾಸಕರಿಗೆ ತಿಳಿಸಿದರು. ಕಂಬಳಕ್ಕೆ ಸರಕಾರದ ಪೂರ್ಣಪ್ರಮಾಣದ ಬೆಂಬಲವನ್ನು ಇದೇ ಸಂದರ್ಭದಲ್ಲಿ ಸಿಎಂ ರವರು ಘೋಷಿಸಿದರು.
ಕಂಬಳಕ್ಕೆ ಪೆಟಾದವರ ಆಕ್ಷೇಪ ಇದ್ದ ಸಂದರ್ಭದಲ್ಲಿ ಅಂದು ಸಿಎಂ ಆಗಿದ್ದ ನೀವು ನಮ್ಮ ಹೋರಾಟಕ್ಕೆ ಸಹಾಯ ಮಾಡಿದ್ದನ್ನು ಶಾಸಕ ಅಶೋಕ್ ರೈ ಸಿಎಂ ಸಿದ್ದರಾಮಯ್ಯರವರ ಬಳಿ ಇದೇ ವೇಳೆ ನೆನಪಿಸಿಕೊಂಡರು.