ಮಾಡಾವು: ಅಂಗಡಿಯಿಂದ ಹಣ ಎಗರಿಸಿ ಕಳ್ಳರಿಬ್ಬರು ಪರಾರಿ
ಪುತ್ತೂರು: ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಗೂಡಂಗಡಿಯಿಂದ ಹಣ ಎಗರಿಸಿ ಪರಾರಿಯಾದ ಘಟನೆ ನ.3ರಂದು ಕೆಯ್ಯೂರು ಗ್ರಾಮದ ಮಾಡಾವುನಿಂದ ವರದಿಯಾಗಿದೆ. ಮಾಡಾವುಮಲೆ ಎಂಬಲ್ಲಿ ಬಸ್ಸು ನಿಲ್ದಾಣದ ಬಳಿ ಗೂಡಂಗಡಿ ವ್ಯಾಪಾರ ಮಾಡುತ್ತಿರುವ ಕೆಯ್ಯೂರು ಪಲ್ಲತ್ತಡ್ಕ ಕಟ್ಟಮನೆ ನಿವಾಸಿ ಪರಮೇಶ್ವರ ಆಚಾರ್ಯ ಎಂಬವರ ಅಂಗಡಿಯಿಂದ ಹಾಡಹಗಲೆ ಕಳ್ಳರು ತಮ್ಮ ಕೈಚಳಕ ತೋರಿಸಿ ಹಣ ಹಾಗೂ ಹಣದ ಪರ್ಸ್ ಅನ್ನು ಎಗರಿಸಿದ್ದಾರೆ.
ಅ.3ರಂದು ಮದ್ಯಾಹ್ನ ಬೆಳ್ಳಾರೆ ಕಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಬೈಕ್ ಅನ್ನು ಅಂಗಡಿಯಿಂದ ಸುಮಾರು 50 ಮೀಟರ್ ದೂರದಲ್ಲಿ ನಿಲ್ಲಿಸಿ ಅಂಗಡಿಗೆ ಬಂದವರು ಮೊದಲಿಗೆ ಪರಮೇಶ್ವರ್ ಆಚಾರ್ಯರ ಬಳಿ ಸಿಗರೇಟ್ ಕೇಳಿ ಪಡೆದುಕೊಂಡು ಅಂಗಡಿಯಿಂದ ಹೊರಗೆ ಹೋಗಿ ಸೇದಿದ್ದಾರೆ. ಬಳಿಕ ಅಂಗಡಿಯೊಳಗೆ ಬಂದವರು ನಮಗೆ ಕುಡಿಯಲು ಕೂಲ್‌ಡ್ರಿಂಕ್ ಕೊಡಿ ಎಂದು ಕೇಳಿ ಕೂಲ್‌ಡ್ರಿಂಕ್ ಪಡೆದು ಕುಡಿದಿದ್ದಾರೆ. ಸಿಗರೇಟ್ ಮತ್ತು ಕೂಲ್‌ಡ್ರಿಂಕ್‌ನ ಹಣವನ್ನು ಕೊಟ್ಟವರು ನಮಗೆ ಸೆಖೆ ಆಗುತ್ತದೆ ಸ್ವಲ್ಪ ಹೊತ್ತು ಕುಳಿತುಕೊಳ್ಳುತ್ತೇವೆ ಎಂದು ಹೇಳಿ ಕುಳಿತುಕೊಂಡಿದ್ದಾರೆ. ಇದೇ ವೇಳೆ ಪರಮೇಶ್ವರ ಆಚಾರ್ಯರು ನಾನು ಊಟ ಮಾಡುತ್ತೇನೆ ಎಂದು ಹೇಳಿ ಬಟ್ಟಲು ತೊಳೆದು ಮನೆಯಿಂದ ಬುತ್ತಿಯಲ್ಲಿ ತಂದಿದ್ದ ಅನ್ನವನ್ನು ಬಟ್ಟಲಿಗೆ ಹಾಕಿ ಊಟಕ್ಕೆ ಕುಳಿತುಕೊಂಡರು. ಈ ವೇಳೆಗಾಗಲೇ ನಾವು ಹೋಗುತ್ತೇವೆ ಎಂದು ಹೇಳಿದ ಅಪರಿಚಿತರು ಅಂಗಡಿಯೊಳಗಿನಿಂದ ಹೊರ ನಡೆದಿದ್ದು ಈ ಕಡೆಯಲ್ಲಿ ಪರಮೇಶ್ವರ್‌ರವರು ಊಟಕ್ಕೆ ಕೈ ಹಾಕುವಷ್ಟರಲ್ಲಿ ಮತ್ತೆ ಅಂಗಡಿಯೊಳಗೆ ಓಡೋಡಿ ಬಂದ ಅಪರಿಚಿತರು ಅಂಗಡಿಯ ಟೇಬಲ್ ಮೇಲಿಟ್ಟಿದ್ದ ಬ್ಯಾಗ್‌ನಿಂದ ಹಣದ ಪರ್ಸ್ ಹಾಗೂ ಪುಸ್ತಕದೊಳಗಿಟ್ಟಿದ್ದ ಹಣವನ್ನು ತೆಗೆದುಕೊಂಡು ಬೈಕ್‌ನಲ್ಲಿ ಮಾಡಾವು ಕಡೆಗೆ ಪರಾರಿಯಾಗಿದ್ದಾರೆ.
ಬೈಕ್‌ನಲ್ಲಿ ಬಂದವರು ಮೊದಲಿಗೆ ಪರಮೇಶ್ವರ ಆಚಾರ್ಯರ ಬಳಿ ಕನ್ನಡ ಭಾಷೆಯಲ್ಲಿ ಸಿಗರೇಟ್ ಕೇಳಿದ್ದಾರೆ. ಆ ಬಳಿಕ ತುಳು ಭಾಷೆಯಲ್ಲಿ ಕೂಲ್‌ಡ್ರಿಂಕ್ ಕೇಳಿದ್ದಾರೆ. ಕೊನೆಯದಾಗಿ ಮಲೆಯಾಳಂ ಭಾಷೆಯಲ್ಲಿ ನಮಗ ಸೆಖೆ ಆಗುತ್ತದೆ ಸ್ವಲ್ಪ ಹೊತ್ತು ಕುಳಿತುಕೊಳ್ಳುತ್ತೇವೆ ಎಂದು ಪರಮೇಶ್ವರ್‌ರವರಲ್ಲಿ ಮಾತನಾಡಿದ್ದಾರೆ. ತುಳು ಭಾಷೆಯಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಂಡ ಪರಮೇಶ್ವರರವರು ನೀವು ಎಲ್ಲಿಯವರು ಏನು ಕೆಲಸ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ನಾವು ಇಲ್ಲಿಯೇ ಪುತ್ತೂರಿನವರು, ಟೈಲ್ಸ್ ಹಾಕುವ ಕೆಲಸ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.