ಲಂಚ ಪಡೆದ ಹಣವನ್ನು ಮರಳಿಸಿದ ಉಗ್ರಾಣಿ
ಶಾಸಕರು ನೀಡಿದ ಗಡುವಿನೊಳಗೆ ಹಣ ವಾಪಸ್..!
ಪುತ್ತೂರು: ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಲು ಮಹಿಳೆಯೊಬ್ಬರಿಂದ ಲಂಚಪಡೆದಿದ್ದ ಹಣವನ್ನು ಉಗ್ರಾಣಿಯೊಬ್ಬರು ಮರಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳ ಹಿಂದೆ ಕಾರ್ಯಕ್ರಮದ ಪ್ರಯುಕ್ತ ಶಾಸಕರಾದ ಅಶೋಕ್ ರಯಯವರು ಕುಂಡಡ್ಕ ದೇವಸ್ಥಾನಕ್ಕೆ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಮಹಿಳೆಯೋರ್ವರು ಶಾಸಕರ ಬಳಿ ಬಂದು ನನ್ನ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿಲ್ಲ, ನನಗೆ ಅಕ್ರಮ ಸಕ್ರಮ ಸಂಜೂರು ಮಾಡಿಲ್ಲ, ನಾನು ಉಗ್ರಾನಿಗೆ 30 ಸಾವಿರ ರೂ ಹಣ ನೀಡಿದ್ದೇನೆ, ಬೀಡಿ ಕಟ್ಟಿ ಜೀವನ ಮಾಡುವ ನನ್ನಿಂದ ಉಗ್ರಾನಿ 30 ಸಾವಿರ ಲಂಚ ಪಡೆದುಕೊಂಡಿದ್ದಾರೆ, ಹಣ ಕೊಟ್ಟರೂ ನನ್ನ ಕೆಲಸ ಮಾಡಿಕೊಟ್ಟಿಲ್ಲ ನನಗೆ ನ್ಯಾಯ ಕೊಡಬೇಕು, ನನಗೆ ಅಕ್ರಮ ಸಕ್ರಮ ಮಾಡಿಕೊಡಬೇಕು ಎಂದು ಶಾಸಕರಾದ ಅಶೋಕ್ ರೈಯವರಲ್ಲಿ ಹೇಳಿಕೊಂಡಿದ್ದರು.
ಮಹಿಳೆಯ ಆರೋಪವನ್ನು ಆಲಿಸಿದ ಶಾಸಕರು ತಕ್ಷಣವೇ ಉಗ್ರಾನಿಯ ನಂಬರ್ ಪಡೆದು ಕರೆ ಮಾಡಿ ನೀವು ಮಹಿಳೆಯಿಂದ ಅಕ್ರಮ ಸಕ್ರಮ ವಿಲೇವಾರಿಗೆ ಪಡೆದುಕೊಂಡಿರುವ 30 ಸಾವಿರ ರೂ. ಹಣವನ್ನು ಒಂದು ವಾರದೊಳಗೆ ಮರಳಿ ಕೊಡಬೇಕು ಇಲ್ಲವಾದರೆ ನಿಮ್ಮನ್ನು ಕೆಲಸದಿಂದ ಸಸ್ಪೆಂಡ್ ಮಾಡಿಸುತ್ತೇನೆ, ಬಡವರಿಂದ ಹಣ ಯಾಕೆ ಪಡೆದುಕೊಂಡಿದ್ದೀರಿ ಎಂದು ಹೇಳಿ ಪಡೆದ ಹಣವನ್ನು ಮರಳಿಸಲು ಒಂದು ವಆರದ ಗಡುವು ನೀಡಿದ್ದರು.
ಸೆ.14 ರಂದು ಮಹಿಳೆಯ ಮನೆಗೆ ಬಂದ ಉಗ್ರಾಣಿ ತಾನುಪಡೆದುಕೊಂಡಿದ್ದ 30 ಸಾವಿರ ರೂ ಲಂಚದ ಹಣವನ್ನು ಮರಳಿಸಿದ್ದಾರೆ ಎಂದು ತಿಳಿದು ಬಂದಿದೆ.