ಕರಾವಳಿ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನತೆಗೆ ನೆಮ್ಮದಿಯ ಜೀವನ:
ಸರಕಾರದ ಯೋಜನೆ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದೇ ನಿಜವಾದ ಅಭಿವೃದ್ದಿ: ಅಶೋಕ್ ರೈ




ಪುತ್ತೂರು: ರಸ್ತೆ, ಮೋರಿ ನಿರ್ಮಾಣ ಮಾಡುವುದು ಮಾತ್ರ ಅಭಿವೃದ್ದಿಯಲ್ಲ ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ಸರಕಾರದ ಯೋಜನೆ ತಲುಪಿಸುವಂತೆ ಮಾಡುವುದೇ ನಿಜವಾದ ಅಭಿವೃದ್ದಿ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಮೈತ್ರಿ ಶುಚಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸರಕಾರ ರಾಜ್ಯದಾದ್ಯಂತ ಎಲ್ಲಾ ಹೆಣ್ಣು ಮಕ್ಕಳಿಗೆ ಮೈತ್ರಿ ಶುಚಿ ಯೋಜನೆಯಡಿ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡುತ್ತಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ 50 ಲಕ್ಷಕ್ಕೂ ವಿದ್ಯಾರ್ಥಿನಿಯರಿಗೆ ಇದು ತಲುಪಲಿದೆ ಪ್ರತಿಯೊಬ್ಬ ವಿದ್ಯಾರ್ಥಿನಿಯರಿಗೂ ಇದು ದೊರಕಲಿದೆ ಎಂದು ಹೇಳಿದರು.


ರಾಜ್ಯದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಇಂದು ಮನೆ ಮಾತಾಗಿದೆ. ಕಟ್ಟಕಡೇಯ ವ್ಯಕ್ತಿಗೂ ಇದರ ಲಾಭ ದೊರಕಿದೆ ಎಂಬ ತೃಪ್ತಿ ಸರಕಾರಕ್ಕಿದೆ. ಉಚಿತ ಬಸ್, ಅನ್ನಾಭಾಗ್ಯ , ಉಚಿತ ವಿದ್ಯುತ್, ಮತ್ತು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಎಲ್ಲರು ಪಡೆಯುವಂತಾಗಿದೆ. ಗ್ರಾಮದ ಕಟ್ಟಕಡೇಯ ಗೃಹಿಣಿಗೂ ಇದು ತಲುಪಿದೆ ಎಂದು ಹೇಳಿದರು.
ರಸ್ತೆ, ಮೋರಿ, ಚರಂಡಿ, ವಿದ್ಯುತ್, ಕುಡಿಯುವ ನೀರು ಇದೆಲ್ಲವೂ ಮೂಲಭೂತ ಸೌಕರ್ಯ ಪಟ್ಟಿಯಲ್ಲಿ ಸೇರುತ್ತದೆ. ಮೂಲಭೂತ ಸೌಕರ್ಯವನ್ನು ಮಾಡಿಕೊಡಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ, ಅದು ಅಭಿವೃದ್ದಿಯಲ್ಲ. ಮೂಲಭೂತ ಸೌಕರ್ಯವನ್ನು ಹೊರತುಪಡಿಸಿದ ಯೋಜನೆಗಳು ಅಭಿವೃದ್ದಿಯಾಗಿದೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಅಭಿವೃದ್ದಿ ಯೋಜನೆಗಳಲ್ಲಿ ಸೇರಿಕೊಳ್ಳುತ್ತದೆ. ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡುವಂತಾಗಿದ್ದರೆ ಅದಕ್ಕೆ ಕಾಂಗ್ರೆಸ್ ಸರಕಾರದ ಯೋಜನೆಗಳೇ ಕಾರಣವಾಗಿದೆ ಎಂದರು.


ಕಳೆದ ಐದು ವರ್ಷಗಳಲ್ಲಿ ರಾಜ್ಯದ ಜನ ನೆಮ್ಮದಿಯನ್ನು ಕಳೆದುಕೊಂಡಿದ್ದರು. ಬೆಲೆ ಏರಿಕೆಯಿಂದಾಗಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಶಾಂತಿಯುತ ಕರ್ನಾಟಕದ ಜೊತೆಗೆ ಹಸಿವು ಮುಕ್ತ ರಾಜ್ಯವಾಗಿ , ಬಡತನ ಮುಕ್ತ ರಾಜ್ಯವಾಗಿ ಕರ್ನಾಟಕ ಮುಂದುವರೆಯುತ್ತಿದೆ. ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರ ಇನ್ನಷ್ಟು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ನೀಡಲಿದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಯನ್ನು ಟೀಕಿಸಿದವರೂ ಇಂದು ಮುಂಚೂಣಿಯಲ್ಲಿ ಬಂದು ಅದರ ಪ್ರಯೋಜನವನ್ನು ಪಡೆಯುತ್ತಿರುವುದು ಗ್ಯಾರಂಟಿ ಯೋಜನೆಯ ಮಹತ್ವ ಏನೆಂಬುದನ್ನು ತಿಳಿಸಿಕೊಡುತ್ತಿದೆ ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಹಿತ ಅನೇಕ ರಾಜಕೀಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!