ಕಾನೂನು ಬದಲಾಗಬೇಕು, ದುಬೈ ಮಾದರಿಯ ಶಿಕ್ಷೆ ವಿಧಿಸಬೇಕು- ಅಶೋಕ್ ರೈ
ಪುತ್ತೂರು: ದೇಶದಲ್ಲಿ ಕಾನೂನು ಕಠಿಣವಾಗಬೇಕಾದ ಅವಶ್ಯಕತೆಯಿದ್ದು ದುಬೈ ಮಾದರಿಯ ಕಾನೂನು ಇಲ್ಲಿ ಜಾರಿಗೆ ಬರಬೇಕಾದ ಅನಿವಾರ್ಯತೆಯಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಎರಡು ದಿನಗಳ ಹಿಂದೆ ಪುತ್ತೂರಿನಲ್ಲಿ ಪದ್ಮರಾಜ ಎಂಬಾತನಿಂದ ಕೊಲೆಯಾದ ವಿಟ್ಲ ಕುದ್ದುಪದವು ಸಮೀಪದ ಗೌರಿ ಅವರ ಮನೆಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ನಮ್ಮಲ್ಲಿ ನಡೆದಂತಹ ಘಟನೆ ದುಬೈಯಲ್ಲಿ ನಡೆಯುತ್ತಿದ್ದರೆ ಒಂದು ವಾರದಲ್ಲಿ ಇಲ್ಲವೇ ಹತ್ತು ದಿನದೊಳಗೆ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸುತ್ತಿದ್ದರು. ಕೊಲೆಗಾರರಿಗೆ, ಅತ್ಯಾಚಾರಿಗಳಿಗೆ ಅದೇ ರೀತಿಯ ಶಿಕ್ಷೆ ಇಲ್ಲೂ ಜಾರಿಯಾಗಬೇಕು. ಅಂತಹ ಶಿಕ್ಷೆ ಜಾರಿಯಾದಾಗಲೇ ಇಂತಹ ದುಷ್ಟ ಕೃತ್ಯಗಳನ್ನು, ಸಮಾಜ ವಿದ್ರೋಹಿ ಕೆಲಸಗಳನ್ನು ಮಟ್ಟ ಹಾಕಲು ಸಾಧ್ಯ ಎಂದು ಅವರು ಹೇಳಿದರು.
ಕಾನೂನಿನ ಭಯ ಇಲ್ಲದೆ ಇರುವುದೇ ಎಂದು ಅನೇಕ ಕೆಟ್ಟ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ. ಕೊಲೆ ಮಾಡಿ ಜೈಲಿಗೆ ಹೋದವರು ವಾಪಸ್ ಬಂದು ರಾಜಾರೋಷವಾಗಿ ತಿರುಗಾಡುತ್ತಾರೆ. ಅವರಿಗೆ ಸಮಾಜದಲ್ಲಿ ವಿಶೇಷ ಗೌರವ ಸಿಗುವ ಕಾರ್ಯಗಳು ಕೆಲವು ನಡೆಯುತ್ತಿದೆ. ಹಾಗಾಗಿ ಇಂತಹ ಕೃತ್ಯ ಎಸಗಿದವರಿಗೆ ಮರಣ ದಂಡನೆ ಶಿಕ್ಷೆ ಆಗಬೇಕು ಎಂದು ಅಶೋಕ್ ರೈ ಹೇಳಿದರು.