ಒಳಮೊಗ್ರು ಗ್ರಾ.ಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ತ್ರಿವೇಣಿ ಪಳ್ಳತ್ತಾರು, ಉಪಾಧ್ಯಕ್ಷರಾಗಿಕಾಂಗ್ರೆಸ್ ಬೆಂಬಲಿತ ಅಶ್ರಫ್ ಉಜಿರೋಡಿ ಆಯ್ಕೆ
ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ತ್ರಿವೇಣಿ ಪಳ್ಳತ್ತಾರು ಹಾಗೂ ಉಪಾಧ್ಯಕ್ಷರಾಗಿ ಅಶ್ರಫ್ ಉಜಿರೋಡಿ ಆಯ್ಕೆಯಾಗಿದ್ದಾರೆ. ಒಳಮೊಗ್ರು ಗ್ರಾ.ಪಂಗೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಸ್ಥಾನ ನಿಗದಿಯಾಗಿತ್ತು. ಆ.14ರಂದು ಆಯ್ಕೆ ಪ್ರಕ್ರಿಯೆ ನಡೆಯಿತು. ಒಟ್ಟು 15 ಮಂದಿ ಸದಸ್ಯ ಬಲ ಹೊಂದಿರುವ ಒಳಮೊಗ್ರು ಗ್ರಾ.ಪಂನಲ್ಲಿ 7 ಮಂದಿ ಬಿಜೆಪಿ ಬೆಂಬಲಿತರು, 7 ಕಾಂಗ್ರೆಸ್ ಬೆಂಬಲಿತರು ಮತ್ತು ಓರ್ವ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿ. ಅದರಲ್ಲಿ 14 ಮಂದಿ ಭಾಗವಹಿಸಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯ ಲತೀಫ್ ಗೈರಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರು, ಹಾಲಿ ಅಧ್ಯಕ್ಷೆಯಾಗಿರುವ ತ್ರಿವೇಣಿ ಪಳ್ಳತ್ತಾರು ಹಾಗೂ ಕಾಂಗ್ರೆಸ್ ಬೆಂಬಲಿತ ಚಿತ್ರಾ ಬಿ.ಸಿ ನಾಮಪತ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಮಹೇಶ್ ಕೇರಿ, ಕಾಂಗ್ರೆಸ್ ಬೆಂಬಲಿತರಾಗಿ ಅಶ್ರಫ್ ಉಜಿರೋಡಿ ಹಾಗೂ ಎಸ್‌ಡಿಪಿಐ ಬೆಂಬಲಿತ ಅಬ್ದುಲ್ ಸಿರಾಜ್ ನಾಮಪತ್ರ ಸಲ್ಲಿಸಿದ್ದರು.
ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆ ಬಳಿಕ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ತ್ರಿವೇಣಿ ಪಳ್ಳತ್ತಾರು ಹಾಗೂ ಚಿತ್ರಾ ಬಿ.ಸಿಯವರು ತಲಾ 7ಮತ ಪಡೆದಿದ್ದರು. ಸಮಾನ ಮತ ಪಡೆದ ಕಾರಣ ಟಾಸ್ ಹಾಕುವ ಮೂಲಕ ವಿಜೇತರನ್ನು ಘೋಷಿಸಲಾಯಿತು. ಅದರಂತೆ ಟಾಸ್ ನಡೆದಾಗ ಬಿಜೆಪಿ ಬೆಂಬಲಿತ ಅಭ್ಯರ್ಥಿ ತ್ರಿವೇಣಿ ಪಳ್ಳತ್ತಾರು ಟಾಸ್ ಗೆದ್ದುಕೊಂಡು ಅಧ್ಯಕ್ಷರಾಗಿ ಆಯ್ಕೆಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಶ್ರಫ್ ಉಜಿರೋಡಿ ಹಾಗೂ ಮಹೇಶ್ ಕೇರಿ ಅವರು ತಲಾ 7 ಮತ ಪಡೆದರು. ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿ ಅಬ್ದುಲ್ ಸಿರಾಜ್ ಯಾವುದೇ ಮತ ಪಡೆದಿರಲಿಲ್ಲ. ಅಂತಿಮವಾಗಿ ಟಾಸ್ ಹಾಕಿದಾಗ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶ್ರಫ್ ಉಜಿರೋಡಿ ಟಾಸ್ ಗೆದ್ದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಸ್ವತಃ ಉಪಾಧ್ಯಕ್ಷ ಸ್ಥಾನಕ್ಕೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಬ್ದುಲ್ ಸಿರಾಜ್ ಅವರು ನಾಮಪತ್ರ ವಾಪಸ್ ಪಡೆಯದೇ ಕಣದಲ್ಲಿದ್ದರು. ಆದರೂ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗ ಅಶ್ರಫ್ ಉಜಿರೋಡಿಗೆ ಮತ ಚಲಾಯಿಸಿಸುವ ಮೂಲಕ ತನ್ನ ಮತವನ್ನೂ ತನಗೆ ಹಾಕಿಕೊಳ್ಳದೇ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು ಎನ್ನುವ ಮಾಹಿತಿ ತಿಳಿದು ಬಂದಿದೆ.